ಗ್ಯಾಸ್​ಗೆ ಬೆಂಕಿ ತಗುಲಿ ಮೂವರ ಸಾವು

ಬೆಂಗಳೂರು: ಸೋರಿಕೆಯಾದ ಅಡುಗೆ ಸಿಲಿಂಡರ್ ಗ್ಯಾಸ್​ಗೆ ಬೆಂಕಿ ತಗುಲಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಬಿಹಾರ ಮೂಲದ ಬಾಣಸವಾಡಿ ನಿವಾಸಿಗಳಾದ ಶಂಕರ್ ಭಗತ್ (17), ಸಂಜೀವ್ (35) ಮತ್ತು ರಾಮ್ ಭಗತ್ (28) ಮೃತರು. ನಿರಂಜನ್ (28) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಣಸವಾಡಿಯ ಮುರುಗನ್ ಥಿಯೇಟರ್ ಬಳಿ ಇರುವ ಬಾಡಿಗೆ ಮನೆ ಯಲ್ಲಿ ಏ.11ರ ಬೆಳಗ್ಗೆ ದುರ್ಘಟನೆ ನಡೆದಿತ್ತು. ಬಿಹಾರದಿಂದ ಕೆಲಸ ಅರಸಿ ಬಂದಿದ್ದ ನಾಲ್ವರು ಬಾಣಸವಾಡಿ ಪ್ಯೂರ್​ಫುಡ್ ಹೆಸರಿನ ಜ್ಯೂಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಬಾಡಿಗೆ ಮನೆಯಲ್ಲಿ ಜತೆಯಾಗಿ ವಾಸಿಸುತ್ತಿದ್ದರು. ಇತ್ತೀಚೆಗೆ ಗ್ಯಾಸ್ ಸಿಲಿಂಡರ್ ವಿತರಕ ಇವರ ಮನೆಗೆ ಬಂದು ಸಿಲಿಂಡರ್​ನಿಂದ ಪೈಪ್ ಮೂಲಕ ಸ್ಟೌಗೆ ಕನೆಕ್ಷನ್ ಕೊಟ್ಟು ಹಿಂದಿರುಗಿದ್ದ. ಏ.11ರ ಬೆಳಗ್ಗೆ 8.30ರಲ್ಲಿ ಅಡುಗೆ ಮಾಡಲು ತಯಾರಿ ನಡೆಸಿದ್ದ ಶಂಕರ್ ಭಗತ್ ಗ್ಯಾಸ್ ಆನ್ ಮಾಡುತ್ತಿದ್ದಂತೆ ಸಿಲಿಂಡರ್​ನಿಂದ ಸೋರಿಕೆಯಾದ ಗ್ಯಾಸ್​ಗೆ ಬೆಂಕಿ ತಗುಲಿ ಮನೆಯಿಡೀ ಆವರಿಸಿದೆ. ಮನೆಯಲ್ಲಿದ್ದ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದರು.

ಆಸ್ಪತ್ರೆಗೆ ದಾಖಲಿಸಿದರು: ಗಾಯಗೊಂಡವರ ಚೀರಾಟ ಕೇಳಿ ಸ್ಥಳಕ್ಕೆ ಬಂದ ನೆರೆಹೊರೆಯವರು ನಾಲ್ವರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಶಂಕರ್ ಭಗತ್ ಮತ್ತು ಸಂಜೀವ್ ಚಿಕಿತ್ಸೆ ಫಲಿಸದೆ ಮಂಗಳವಾರ ಮೃತಪಟ್ಟರೆ, ರಾಮ್ ಭಗತ್ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಸಿಲಿಂಡರ್ ಸ್ಪೋಟಗೊಂಡಿಲ್ಲ

ಸಿಲಿಂಡರ್​ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಶಂಕರ್ ಭಗತ್ ಬೆಳಗ್ಗೆ ಅಡುಗೆ ತಯಾರಿಸಲು ಸ್ಟೌಗೆ ಬೆಂಕಿ ಕೊಡುತ್ತಿ ದ್ದಂತೆ ಮನೆಯೊಳಗೆ ಸೋರಿಕೆಯಾಗಿದ್ದ ಅನಿಲಕ್ಕೆ ಬೆಳಕಿ ತಗುಲಿ ಮನೆಯೆಲ್ಲ ಆವರಿಸಿದೆ. ಆದರೆ, ಸಿಲಿಂಡರ್ ಸ್ಪೋಟಗೊಂಡಿಲ್ಲ. ಸಿಲಿಂಡರ್​ನಲ್ಲಿದ್ದ ಅನಿಲ ಸೋರಿಕೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಬಳಿಕ ದುರ್ಘಟನೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಬಾಣಸವಾಡಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *