ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ ಚಾಂಪಿಯನ್

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಯಚೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ಕೆಎಸ್ಸಿಎ ರಾಯಚೂರ ಝೋನ್ 2ನೇ ಡಿವಿಜನ್ ಲೀಗ್ನ ಫೈನಲ್ ಪಂದ್ಯದಲ್ಲಿ ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ ಕಲಬುರಗಿ ಗೆಲುವು ಸಾಧಿಸುವ ಮೂಲಕ 2ನೇ ಡಿವಿಜನ್ ಲೀಗ್ನ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕರ್ನಾಟಕ ಕ್ರಿಕೆಟ್ ಕ್ಲಬ್ ವಿಜಯಪುರ 34.1 ಓವರ್ನಲ್ಲಿ ಆಲೌಟ್ ಆಗಿ ಕೇವಲ 116 ರನ್ ಗಳಿಸಿತು. ಝೇದ್ ತವಿಲ್ದಾರ್ (39 ರನ್), ಖುಂದ್ ಮೀರ್ ಮತೀನ್ (34 ರನ್) ಹೊರತುಪಡಿಸಿ ಐವರು ಬ್ಯಾಟ್ಸ್ಮನ್ಗಳು ಸೊನ್ನೆ ಸುತ್ತಿದರು. ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ ಕಲಬುರಗಿ ಪರ ಬೌಲಿಂಗ್ನಲ್ಲಿ ಸಾದಿಖ್ ಅಹ್ಮದ್ (4 ವಿಕೆಟ್), ಕುಶಾಲ್ ಗೌಡ, ಗಣೇಶ ತಲಾ 3 ವಿಕೆಟ್ ಪಡೆದು ಮಿಂಚಿದರು.

117 ರನ್ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್ 30.5 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 119 ರನ್ಗಳಿಸಿ ಗೆಲುವಿನ ನಗೆ ಬೀರಿತು. ಆರಂಭಿಕ ಬ್ಯಾಟ್ಸ್ಮನ್ ಚಂದ್ರಶೇಖರ ಪಾಟೀಲ್ (35 ರನ್) ಔಟಾದ ಬಳಿಕ ತಂಡ ಸೋಲಿನತ್ತ ಮುಖ ಮಾಡಿತ್ತು. ನಂತರ ಬಂದ ಬರೊಬ್ಬರಿ 5 ದಾಂಡಿಗರು ಒಂದಂಕಿ ಮೊತ್ತ ದಾಟುವಷ್ಟರಲ್ಲೇ ಪೆವಿಲಿಯನ್ ಸೇರಿಸಿದರು. ಅಂತಿಮವಾಗಿ ನಾಯಕ ವಿಜಯ ಕುಮಾರ ರಾಠೋಡ್ (25 ರನ್) ಹಾಗೂ ಸುಧೀರ ಚವ್ಹಾಣ್ (19 ರನ್) ಭರ್ಜರಿ ಬ್ಯಾಟಿಂಗ್ ಮಾಡಿ ಗ್ಯಾಲಕ್ಸಿಯನ್ನು ಗೆಲುವಿನ ದಡ ಸೇರಿಸಿದರು. ಕೆಸಿಸಿ ವಿಜಯಪುರ ಪರ ಬೌಲರ್ಗಳು ಒಂದು ಹಂತದಲ್ಲಿ ಮೇಲುಗೈ ಸಾಧಿಸಿದ್ದರು. ಆದರೆ ಟಾರ್ಗೆಟ್ ಕಡಿಮೆ ಮತ್ತು ಇತರೆ ರನ್ಗಳು ಹೆಚ್ಚು ಹರಿದುಬಂದಿದ್ದರಿಂದ ಸೋಲನ್ನು ತಪ್ಪಿಸಿಕೊಳ್ಳಲು ಆಗಲಿಲ್ಲ. ಕೊನೆಯದಾಗಿ ಖುಂದ್ ಮೀರ್ ಮತೀನ್ 3, ಸಲೀಮ್ ಬೇಪರಿ 2 ವಿಕೆಟ್ ಪಡೆದರು.

ಕುಶಾಲ ಗೌಡ ಪ್ಲೇಯರ್ ಆಪ್ ದಿ ಮ್ಯಾಚ್ ಪ್ರಶಸ್ತಿಗೆ ಬಾಜನರಾದರು. ವಿ.ಜಿ. ವಿನೋದಕುಮಾರ, ಎ.ಜಿ. ಪಟೇಲ್ ಅಂಪೈರ್ಗಳಾಗಿ ಹಾಗೂ ನಾಗೇಶ ಸುರಗಿಹಳ್ಳಿ ಸ್ಕೋರರ್ ಕಾರ್ಯನಿರ್ವಹಿಸಿದರು.

ಟಾಪ್-5 ಬ್ಯಾಟ್ಸ್ಮನ್, ಬೌಲರ್ಸ್

ಟೂರ್ನಿಯಲ್ಲಿ ಮಹೇಶ ಜಾಧವ್ (200 ರನ್) ಅತ್ಯಧಿಕ ರನ್ ಗಳಿಸಿ ಟಾಪ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರೆ, ಸುಧೀರ ಚವ್ಹಾಣ್ (196 ರನ್), ತಿಪ್ಪಾರೆಡ್ಡಿ (192 ರನ್), ಶ್ರೇಯಸ್ ಪುರಾಣಿಕ (154 ರನ್), ರಾಜೇಶ ಕಣ್ಣೂರ (152 ರನ್) ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಸಚಿನ್ ರಾಠೋಡ್ 19 ವಿಕೆಟ್ ಕಬಳಿಸಿ ಟಾಪ್ ಸ್ಥಾನ ಅಲಂಕರಿಸಿದ್ದಾರೆ. ಉಳಿದಂತೆ ಕುಶಾಲ ಗೌಡ (15 ವಿಕೆಟ್), ಮಹೇಶ ಜಾಧವ್ (14 ವಿಕೆಟ್), ಇರ್ಫಾನ್ ಹಾಗೂ ಗಣೇಶ ಜಿ. ತಲಾ 13 ವಿಕೆಟ್ ಪಡೆದು ನಾಲ್ಕನೇ ಸ್ಥಾನ ಅಲಂಕರಿಸಿದ್ದು, ಖುಂದ್ ಮೀರ್ ಮತೀನ್ 12 ವಿಕೆಟ್ ಪಡೆದಿದ್ದಾರೆ.

ಸಿಕ್ಸ್, ಫೋರ್

ಕಳೆದ 14 ದಿನಗಳಿಂದ ಕಲಬುರಗಿ ಹಾಗೂ ರಾಯಚೂರಿನಲ್ಲಿ ನಡೆದ ಟೂರ್ನಿಯಲ್ಲಿ ಆಟಗಾರರ ಬ್ಯಾಟ್ನಿಂದ ಒಟ್ಟು 741 ಬೌಂಡರಿ ಹಾಗೂ 88 ಸಿಕ್ಸರ್ಗಳು ಸಿಡಿದಿವೆ. ಟೂರ್ನಿಯಲ್ಲಿ ಸಿಟಿ ಇಲೆವನ್ ಕ್ರಿಕೆಟ್ ಕ್ಲಬ್ ರಾಯಚೂರು ತಂಡದ ತಿಪ್ಪಾ ರೆಡ್ಡಿ (28 ಫೋರ್) ಅತ್ಯಧಿಕ ಬೌಂಡರಿ ಬಾರಿಸಿದರೆ, ಸಿಟಿ ಇಲೆವನ್ ಕ್ರಿಕೆಟ್ ಕ್ಲಬ್ ಬೀದರ್ನ ಅನುಪಮ (5 ಸಿಕ್ಸರ್ ) ಅತ್ಯಧಿಕ ಸಿಕ್ಸರ್ ಸಿಡಿಸಿದ್ದಾರೆ.