ಗೌಳಿವಾಡದಲ್ಲಿ ಜೀವಜಲದ ಅಭಾವ

ಮುಂಡಗೋಡ: ತಾಲೂಕಿನ ಮೈನಳ್ಳಿ ಗ್ರಾಮದ ಗೌಳಿವಾಡದ ನಲ್ಲಿಗಳಲ್ಲಿ ಸಮರ್ಪಕ ನೀರು ಬರದೇ ಜೀವಜಲದ ಅಭಾವ ಉಂಟಾಗಿದೆ. ಅಧಿಕಾರಿಗಳು ಮತ್ತು ವಾಟರ್​ವುನ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈನಳ್ಳಿ ಗ್ರಾಮದ ಗೌಳಿವಾಡದಲ್ಲಿ 200 ನಲ್ಲಿಗಳ ಸಂಪರ್ಕವಿದೆ. ಪ್ರತಿ ವರ್ಷ ಸರಿಯಾಗಿ ನೀರಿನ ಕರ ತುಂಬುತ್ತಾ ಬಂದಿದ್ದು , ಒಂದು ವರ್ಷದಿಂದ ನಲ್ಲಿಗಳಲ್ಲಿ ನೀರಿನ ಸರಬರಾಜು ಸರಿಯಾಗಿ ಆಗದ ಕಾರಣ ಕುಡಿಯಲು, ಬಳಕೆಗಾಗಿ ನೀರು ಸಾಲುತ್ತಿಲ್ಲ. ಈ ಹಿಂದೆ ಇದ್ದ ದಿನಗೂಲಿ ವಾಟರ್​ವುನ್ ಬೆಳಗ್ಗೆ ಮತ್ತು ಸಂಜೆ ನೀರು ಬಿಡುತ್ತಿದ್ದರು. ಈಗಿರುವ ವಾಟರ್​ವುನ್ ಬೆಳಗ್ಗೆ ಒಂದೇ ಹೊತ್ತು ಅರ್ಧ ಗಂಟೆ ಮಾತ್ರ ನೀರು ಬಿಡುತ್ತಾರೆ. ಅದೂ ಕೆಸರಿನಿಂದ ಕೂಡಿದ ಸಣ್ಣದಾಗಿ ನೀರು ಬೀಳುತ್ತದೆ. ಟ್ಯಾಂಕ್ ಸ್ವಚ್ಛ ಮಾಡದೇ ವರ್ಷಗಳೇ ಕಳೆದಿವೆ ಎಂದು ಆರೋಪಿಸಿದರು.

ಅಧಿಕಾರಿಗಳ ನಿಷ್ಕಾಳಜಿಯಿಂದ ಕೆಲವರು ನಲ್ಲಿಗೆ ಮೋಟಾರು ಹಚ್ಚಿ ನೀರು ತುಂಬುತ್ತಾರೆ. ಇದರಿಂದ ಇನ್ನುಳಿದವರಿಗೆ ತುಂಬಾ ತೊಂದರೆಯಾಗಿದೆ. ಇದಲ್ಲದೆ, ಎತ್ತರವಾದ ಪ್ರದೇಶದಲ್ಲಿದ್ದ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಇದರಿಂದ ತಗ್ಗುಗಳನ್ನು ತೋಡಿ ನಲ್ಲಿಯಿಂದ ನೀರು ತುಂಬಬೇಕಾಗಿದೆ. ಕೊಳವೆ ಬಾವಿ ಕೊರೆಸಿ 15 ವರ್ಷಗಳಾಗಿವೆ. ಬೋರ್​ವೆಲ್​ನಿಂದ ಟ್ಯಾಂಕ್​ಗೆ 250 ಮೀಟರ್ ಅಂತರವಿದೆ. ಹಾಗಾಗಿ ನೀರು ಕಡಿಮೆ ಬರುತ್ತದೆ. ಇನ್ನೊಂದು ಬೋರ್​ವೆಲ್​ನ ಅಗತ್ಯವಿದ್ದು, ಗ್ರಾ.ಪಂ. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಹೊಸ ಪಂಪ್ ಖರೀದಿಸಲಾಗಿದೆ. ಸಾರ್ವಜನಿಕವಾಗಿ ಟ್ಯಾಂಕ್​ಗಳಿಗೆ ಸಮರ್ಪಕವಾಗಿ ನೀರು ಸರಬರಾಜಾಗುತ್ತಿದ್ದು ನಾಳೆಯಿಂದಲೇ ನಲ್ಲಿಗಳಿಗೂ ನೀರಿನ ಸರಬರಾಜು ಸಮರ್ಪಕವಾಗಿ ಪೂರೈಸಲಾಗುವುದು. ವಾಟರ್​ವುನ್​ಗೆ ಕೂಡಲೇ ನೊಟೀಸ್ ಜಾರಿ ಮಾಡುತ್ತೇನೆ. | ಮಂಜುನಾಥ ಪಿಡಿಒ, ಮೈನಳ್ಳಿ

ಸರ್ಕಾರದಿಂದ ನೇಮಕ ಮಾಡಿರುವ ಈಗಿರುವ ವಾಟರ್​ವುನ್ ಸಮರ್ಪಕವಾಗಿ ನೀರು ಬಿಡುತ್ತಿಲ್ಲ. ಹಿಂದಿನ ದಿನ ಬಂದು ಟ್ಯಾಂಕ್​ನಲ್ಲಿ ನೀರು ತುಂಬಿಸಿ ಶೇಖರಣೆ ಮಾಡದೆ ಒಮ್ಮೇಲೆ ಬೆಳಗ್ಗೆ ಬಂದು ನೀರನ್ನು ಟ್ಯಾಂಕ್​ಗೆ ತುಂಬಿಸಿ ನಲ್ಲಿಯಲ್ಲಿ ನೀರು ಬಿಡುತ್ತಾನೆ. ನಲ್ಲಿಯಿಂದ ಬರುವ ಕೆಸರಿನಿಂದ ಕೂಡಿದ ನೀರು ಕುಡಿಯಲಿಕ್ಕೆ ಬಳಸದಂತಾಗಿದೆ. | ಬಾಗು ಅವನೆ, ಗೌಳಿವಾಡ ನಿವಾಸಿ

ಮಕ್ಕಳನ್ನು ಶಾಲೆಗೆ ಕಳಿಸುವ ವೇಳೆಯಲ್ಲಿ ಅವಸರದಿಂದ ನೀರು ತುಂಬಬೇಕು. ಅದು ಸಾಕಾಗದೆ ನೀರಿಗಾಗಿ ಬೇರೆ ಕಡೆಗೆ ಹೋಗಬೇಕಾಗಿ ಬಂದಿದೆ. ಹೊಲ ಗದ್ದೆಗಳ ಕೆಲಸಕ್ಕೆ ಹೋಗುವವರಿಗೆ ತುಂಬಾ ತೊಂದರೆಯಾಗಿದೆ. | ಸಾವಿತ್ರಿ ಠಕ್ಕು ಜೋರೆ, ಗೌಳಿವಾಡ ನಿವಾಸಿ