ಗೌರವ ಕೊಡ್ತೀರಾ? ಜಾಗ ಖಾಲಿ ಮಾಡ್ತೀರಾ?

ಶಿವಮೊಗ್ಗ: ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ಕೊಡುವುದನ್ನು ಮೊದಲು ಕಲಿಯಬೇಕು. ಇಲ್ಲವಾದರೆ ಜಾಗ ಖಾಲಿ ಮಾಡಬೇಕು ಎಂದು ಎಂಎಲ್​ಸಿ ಆಯನೂರು ಮಂಜುನಾಥ್, ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಮತು ಸಹಾಯಕ ಆಯುಕ್ತೆ ಡಾ. ಎಸ್.ಎಚ್.ಸಹನಾ ಅವರಿಗೆ ಎಚ್ಚರಿಕೆ ನೀಡಿದರು.

ಸ್ಮಾರ್ಟ್​ಸಿಟಿಗೆ ಆಯ್ಕೆಯಾಗಿದ್ದರೂ ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಈ ಬಗ್ಗೆ ಸಾಕಷ್ಟು ದೂರು ನೀಡಿದ್ದರೂ ಸ್ಥಳ ಪರಿಶೀಲಿಸುತ್ತಿಲ್ಲ. ಕಾರ್ಪೆರೇಟರ್​ಗಳು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಮೇಯರ್ ಕರೆದರೂ ಕಚೇರಿಗೆ ಹೋಗಲ್ಲ, ಇದೇ ದುವರ್ತನೆ ಮುಂದುವರಿದರೆ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಬೇಕಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಬಂದು ಆರು ತಿಂಗಳು ಕಳೆದರೂ ಬೀದಿ ಬದಿ ವ್ಯಾಪಾರಿಗಳ ಕಮಿಟಿ ರಚನೆ ಮಾಡಿಲ್ಲ. ಅವರಿಗೆ ವಾರ್ಡ್ ಮತ್ತು ಸ್ಥಳ ಗುರುತಿಸಿಲ್ಲ. ಸಮರ್ಪಕ ಯೋಜನೆ ರೂಪಿಸಿಲ್ಲ. ಗುರುತಿನ ಚೀಟಿ ನೀಡಿಲ್ಲ. ಹೊಸ ಬಡಾವಣೆಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಮಾರುಕಟ್ಟೆ ವಲಯ ಕಾಯ್ದಿರಿಸಿಲ್ಲ. ಈ ಬಗ್ಗೆ ಆಯುಕ್ತರು ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ರಚನೆ ಆಗದ ವಾರ್ಡ್ ಸಮಿತಿ:ಮೇಯರ್, ಉಪಮೇಯರ್ ಆಡಳಿತ ಅಸ್ತಿತ್ವಕ್ಕೆ ಬಂದಿದ್ದರೂ ಏರಿಯಾ ಸಭಾ ಹಾಗೂ ವಾರ್ಡ್ ಸಮಿತಿಯನ್ನೂ ರಚಿಸಿಲ್ಲ. ಬಡವರು ತಮ್ಮ ಹಕ್ಕಿಗಾಗಿ ಪಾಲಿಕೆಗೆ ಅಲೆದಾಡುವಂತಾಗಿದೆ. ಸ್ವಚ್ಛತೆ, ಕುಡಿಯುವ ನೀರು, ರಸ್ತೆ, ಚರಂಡಿ ಅವ್ಯವಸ್ಥೆಗೆ ಜನರು ರೋಸಿ ಹೋಗಿದ್ದಾರೆ. ಅಧಿಕಾರಿಗಳ ದರ್ಬಾರ್​ನಲ್ಲಿ ಜನತೆ ಅಂಧಕಾರದಲ್ಲಿ ಉಳಿಯುವಂತಾಗಿದೆ. ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿಎಂ ಗಾದಿಗೆ ಗುದ್ದಾಟ:ಶಿವಮೊಗ್ಗ: ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಮೈತ್ರಿ ಸರ್ಕಾರದಲ್ಲಿ ಕಚ್ಚಾಟ ಜೋರಾಗಿದ್ದು, ಆಂದೋಲನ ರೂಪ ಪಡೆದುಕೊಂಡಿದೆ. ಲೋಕಸಭೇ ಚುನಾವಣೆ ಫಲಿತಾಂಶದ ಬಳಿಕ ಎಚ್.ಡಿ.ಕುಮಾರಸ್ವಾಮಿ ಸಿಎಂ ಸ್ಥಾನದಲ್ಲಿ ಖಚಿತವಾಗಿ ಇರಲ್ಲ ಎಂದು ಎಂಎಲ್​ಸಿ ಆಯನೂರು ಮಂಜುನಾಥ್ ಹೇಳಿದರು.

ರಾಜ್ಯದಲ್ಲಿ ಶಿವಮೊಗ್ಗ ಸೇರಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಇದೇ ಕಾರಣಕ್ಕೆ ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದು ಆತಂಕ ಹೆಚ್ಚಾಗುತ್ತಿದೆ. ಸಿಎಂ ಗಾದಿಗೆ ಸಿದ್ದರಾಮಯ್ಯ ಸೇರಿ ಹಲವರು ಗುದ್ದಾಟ ನಡೆಸಿದ್ದಾರೆ ಎಂದು ಹೇಳಿದರು. ಶಿವಮೊಗ್ಗದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲ್ಲುತ್ತಾರೆ. ಅದೇ ರೀತಿ ಚಿಂಚೊಳ್ಳಿ ಮತ್ತು ಕುಂದಗೋಳ ಉಪ ಚುನಾವಣೆಗಳಲ್ಲೂ ಬಿಜೆಪಿ ಗೆಲುವಿನ ನಗೆ ಬೀರಲಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *