ಗೌರವಧನ ಹೆಚ್ಚಳಕ್ಕೆ ಪಟ್ಟು

ತುಮಕೂರು: ಗ್ರಾಮೀಣ ಭಾಗದಲ್ಲಿ ಬಡಜನರ ಆರೋಗ್ಯ ಕಾಪಾಡಲು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಸೇರಿ ವಿವಿಧ ಸೌಲಭ್ಯಕ್ಕೆ ಆಗ್ರಹಿಸಿ ಶುಕ್ರವಾರ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಪ್ರತಿಭಟನೆ ನಡೆಸಿತು.

ಬಿಜಿಎಸ್ ವೃತ್ತದಿಂದ ಜಿಪಂ ಕಚೇರಿಯವರೆಗೂ ಮೆರವಣಿಗೆಯಲ್ಲಿ ತೆರಳಿದ ನೂರಾರು ಆಶಾ ಕಾರ್ಯಕರ್ತೆಯರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶಗಳಲ್ಲಿ ಸುಮಾರು 40 ಸಾವಿರ ಆಶಾ ಕಾರ್ಯಕರ್ತೆಯರಿದ್ದಾರೆ. ಸದಾ ಜನರ ಮಧ್ಯೆ ಇದ್ದು ಆರೋಗ್ಯ ಇಲಾಖೆಯ ಸೇವೆ ಜನರಿಗೆ ತಲುಪಿಸುತ್ತಿರುವ ಸಿಬ್ಬಂದಿಗೆ ಕನಿಷ್ಠ ವೇತನ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಒಕ್ಕೂಟದ ಮುಖ್ಯಸ್ಥೆ ಡಿ.ನಾಗಲಕ್ಷ್ಮೀ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಕನಿಷ್ಠ 6 ಸಾವಿರ ರೂ. ವೇತನ ನಿಗದಿಪಡಿಸಿ, ಪ್ರತಿ ತಿಂಗಳು ನಿಯಮಿತವಾಗಿ ನೀಡಬೇಕು. ಆರ್​ಸಿಎಚ್ ಪೋರ್ಟಲ್​ಗೆ ಆಶಾ ವೇತನ ಲಿಂಕ್ ಮಾಡಿರುವುದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ದುಡಿದಷ್ಟು ವೇತನ ಪ್ರತಿ ತಿಂಗಳು ಪಾವತಿಸಲು ಕ್ರಮ ಕೈಗೊಳ್ಳಬೇಕು. ಹಿಂದಿನ ಸರ್ಕಾರದ ಭರವಸೆಯಂತೆ ಆಶಾಗಳಿಗೆ ಉಚಿತ ವಸತಿ ಸೌಲಭ್ಯ, ಆಶಾ ಕ್ಷೇಮಾಭಿವೃದ್ಧಿ ಸ್ಥಾಪಿಸಿ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ, ಮರಣ ಹೊಂದಿದಲ್ಲಿ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಪಿಂಚಣಿ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ನಗರ ಜೀವನಮಟ್ಟಕ್ಕೆ ತಕ್ಕಂತೆ ಹೆಚ್ಚಿನ ಪ್ರೋತ್ಸಾಹ ಧನ ನಿಗದಿಪಡಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು ಜಿಪಂ ಅಧಿಕಾರಿಗಳ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಎಸ್.ಎನ್.ಸ್ವಾಮಿ, ಲತಾ, ಅಶ್ವಿನಿ ನೇತೃತ್ವ ವಹಿಸಿದ್ದರು.