ಗೌರಮ್ಮನ ಬದುಕು ಕಸಿದ ಗಂಗಮ್ಮ!

ಉಪ್ಪಿನಬೆಟಗೇರಿ: ಆ ಮಹಿಳೆ ಹೇಗೋ ಕೂಲಿ ನಾಲಿ ಮಾಡಿ ಜೀವನ ದೂಡುತ್ತಿದ್ದಳು. ಗಂಡ ಅಗಲಿ ಹಲವು ವರ್ಷಗಳೇ ಆದವು. ಮಕ್ಕಳಂತೂ ಇಲ್ಲವೆ ಇಲ್ಲ. ಇದ್ದ ಮನೆಯೊಂದನ್ನು ಬಿಟ್ಟರೆ ಜಮೀನು, ಆಸ್ತಿ-ಪಾಸ್ತಿ ಇಲ್ಲ. ದಿನಗೂಲಿ ಮಾಡಿದರಷ್ಟೇ ನಿತ್ಯದ ತುತ್ತಿನ ಚೀಲ ತುಂಬುವುದು. ಆದರೆ, ಮಳೆರಾಯನು ಜೀವಕ್ಕೆ ಆಸರೆಯಾಗಿದ್ದ ಒಂದೇ ಒಂದು ಸೂರನ್ನು ಕಿತ್ತುಕೊಂಡು ಅನಾಥ ಮಾಡಿದ್ದಾನೆ.

ಹೌದು, ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಪಂ ವ್ಯಾಪ್ತಿಗೆ ಬರುವ ಹನುಮನಾಳ ಗ್ರಾಮದ ಗೌರಮ್ಮ ಹಿರೇಮಠ ಈಗ ಅಕ್ಷರಶಃ ಬೀದಿ ಪಾಲಾಗಿದ್ದಾರೆ. ಇದ್ದ ಮನೆ ನೆಲಸಮ ಆಗಿರುವುದರಿಂದ, ಶಾಲೆಯಲ್ಲಿಯೇ ಆಶ್ರಯ ಪಡೆಯುತ್ತಿದ್ದಾರೆ. ಮೂರ್ನಾಲ್ಕು ದಿನದಿಂದ ಹೇಗೋ ಕಾಲ ಕಳೆದಿದ್ದ ಅವರು, ಈಗ ಮಕ್ಕಳ ಜತೆಯಲ್ಲಿಯೇ ಪಾಠ ಕೇಳುತ್ತ ಬದುಕು ನಡೆಸುವಂತಾಗಿದೆ.

‘ಊಟ ಮಾಡಿ ರಾತ್ರಿ ಮಲಗಿದಾಗ ಏನೋ ಬಿದ್ದ ಹಾಗೆ ಸಪ್ಪಳ ಆತ್ರಿ. ಅದನ್ನು ನೋಡೋಣ ಅಂತ ಹೊರಗ ಬಂದಾಗ ಪಕ್ಕದ ಮನಿ ಬಿದ್ದಿದ್ದು ಗೊತ್ತಾಗಿ ಮತ್ತ ಮನೀಗಿ ಬಂದ ಮಲಗಬೇಕ ಅನ್ನುವಷ್ಟರಾಗ ನಮ್ಮ ಮನೀ ಮೇಲಿನ ಮಣ್ಣ ಬೀಳಾಕ ಶುರು ಆತ್ರಿ. ಇನ್ನೇನ ಎಲ್ಲಾ ಬೀಳತೈತಿ ಅಂತ ತಿಳದಾಕಿನ ಓಡಿ ಹೊರಗ ಬರುವಷ್ಟರಲ್ಲಿ ಮನೀ ಪೂರ್ತಿಯಾಗಿ ಬಿದ್ದ ನನ್ನ ಜೀವಾ ಮಾತ್ರ ಉಳದೈತಿ ನೋಡ್ರಿ. ಇದೆಲ್ಲ ನೋಡಾಕತ್ರ ನನ್ನ ಜೀವಾನು ಹೋಗಿದ್ರ ಚಲೋ ಇತ್ ನೋಡ್ರಿ’ ಎಂಬುದು ಗೌರಮ್ಮ ಅವರ ಅಳಲು.

ಮನೆ ಬಿದ್ದ ದಿನದಿಂದ ಗ್ರಾಮದ ಶಾಲೆಯಲ್ಲಿಯೇ ಉಳಿದುಕೊಂಡಿರುವ ಗೌರಮ್ಮ, ಮುಂದೇನು ಎಂಬ ಚಿಂತೆಯಲ್ಲಿಯೇ ದಿನದೂಡುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾಂಕೇತಿಕವಾಗಿ ಮಾತ್ರ ಮನೆ ಬಿದ್ದವರಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ. ‘ಕೆಲವೇ ದಿನಗಳಲ್ಲಿ ನಿಮಗೂ ಕೂಡ ಪರಿಹಾರ ಸಿಗುತ್ತದೆ’ ಎಂದು ಶಾಸಕರು ಮತ್ತು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಬಸವ ವಸತಿ ಯೋಜನೆಯಡಿ ಮನೆಯನ್ನೂ ಹಾಕಿ ಕೊಡಲಾಗುವುದು ಎಂದಿದ್ದಾರೆ. ಇತ್ತ ಮಕ್ಕಳ ಜತೆಯಲ್ಲಿಯೇ ಕೊಠಡಿಯಲ್ಲಿ ಉಳಿದಿರುವ ಗೌರಮ್ಮ ಸೂರಿನ ಕನಸಿನಲ್ಲಿಯೇ ದಿನದೂಡುತ್ತಿದ್ದಾರೆ.

ಎಂಟ ದಿನಾ ಆತ್ರಿ ನಾ ಶಾಲ್ಯಾಗ ಬಂದ ಉಳದೇನ್ರಿ. ನನ್ನ ಮನೀ ಏನಾಗೈತಿ ಅಂತ ಗೊತ್ತಿಲ್ಲ. ದುಡಕೊಂಡ ಹೊಟ್ಟಿ ತುಂಬಕೋಳಾಕ ಹೊಲಾ ಇಲ್ಲ. ಇದ್ದ ಮನೀನು ಬಿದ್ದೈತಿ. ಮಕ್ಕಳಿಲ್ಲ ಮರಿ ಇಲ್ಲ. ಹೆಂಗೋ ಮಾಡಿ ಮನೀ ಐತಿ ಅಂತ ಕೂಲಿ ಮಾಡಿ ಜೀವನಾ ಸಾಗಸಾಕತ್ತಿನ್ರಿ. ಆದರ ಈಗ ಮನೀನೂ ಇಲ್ಲದಂಗಾಗಿ ಬೀದಿಗಿ ಬಂದೇನ್ರಿ.

| ಗೌರಮ್ಮ ಹಿರೇಮಠ, ಸಂತ್ರಸ್ತೆ

ಗೌರಮ್ಮಳ ಮನೆ ಹಾಳಾಗಿರುವ ಬಗ್ಗೆ ಈಗಾಗಲೇ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅವರಿಗೆ ಪರಿಹಾರ ನೀಡಲು ಮೇಲಧಿಕಾರಿಗಳಿಗೆ ವರದಿ ನೀಡಲಾಗಿದ್ದು, ಆದಷ್ಟು ಬೇಗ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

| ಬಿ.ಎ. ಬಾವಾಕಾನವರ ಪಿಡಿಒ, ಉಪ್ಪಿನಬೆಟಗೇರಿ

 

Leave a Reply

Your email address will not be published. Required fields are marked *