ಗೌಡರ ಸೋಲಿಗೆ ಶ್ರೀನಿವಾಸ್ ತಲೆದಂಡ?

ತುಮಕೂರು : ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ದೋಸ್ತಿಗಳು ಸರ್ಕಸ್ ಆರಂಭಿಸಿದ್ದು, ಇದರ ಭಾಗವಾಗಿ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಸಚಿವ ಸ್ಥಾನ ತ್ಯಾಗ ಮಾಡಬೇಕಾಗಬಹುದು ಎಂಬ ಗುಸುಗುಸು ಹಬ್ಬಿದೆ.

ಅತೃಪ್ತ ಶಾಸಕರು ಬಿಜೆಪಿ ಪಾಲಾಗದಂತೆ ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿರುವ ಜೆಡಿಎಸ್, ಶ್ರೀನಿವಾಸ್ ಅವರಿಂದ ರಾಜೀನಾಮೆ ಪಡೆದು ಹೊಸಬರಿಗೆ ಅವಕಾಶ ನೀಡಲಿದೆ ಎನ್ನಲಾಗುತ್ತಿದೆ. ಮೇಲ್ನೋಟಕ್ಕೆ ಈ ಕಾರಣ ಹೇಳಲಾಗುತ್ತಿದೆಯಾದರೂ ಗೌಡರ ಸೋಲಿಗೆ ವಾಸು ತಲೆದಂಡವಾಗುತ್ತಿದೆ ಎಂಬ ಚರ್ಚೆ ಶುರುವಾಗಿದೆ.

ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ಪರ ಅಲೆಯಿದೆ, ಹೀಗಾಗಿ ದೇವೇಗೌಡರು ಸ್ಪರ್ಧಿಸುವುದು ಬೇಡ ಎಂದು ಹೇಳಿದ್ದ ಶ್ರೀನಿವಾಸ್ ಜೆಡಿಎಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದರು. ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದರೂ ಗೆಲುವಿಗೆ ತಂತ್ರಗಾರಿಕೆ ರೂಪಿಸುವಲ್ಲಿ ವಿಫಲವಾಗಿದ್ದೇ ಸೋಲಿಗೆ ಕಾರಣ ಎಂದು ಮುನಿಸಿಕೊಂಡಿರುವ ಗೌಡರ ಕುಟುಂಬ ಶ್ರೀನಿವಾಸ್ ತಲೆದಂಡಕ್ಕೆ ಮುಂದಾಗಿದೆ ಎನ್ನಲಾಗಿದೆ.

ಜಿಎಸ್ಬಿಗೆ ಸಚಿವ ಶ್ರೀನಿವಾಸ್ ಸವಾಲ್! : ಹೇಮಾವತಿ ಹೆಸರು ಹೇಳಿಕೊಂಡು ಗೆದ್ದಿರುವ ಜಿ.ಎಸ್.ಬಸವರಾಜು ಜಿಲ್ಲೆಯ ಕೆರೆಗಳಿಗೆ ನೀರು ಹರಿಸಿ ತೋರಿಸಲಿ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಸವಾಲು ಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇವರು ಯಾವತ್ತು ಹೋರಾಟ ಮಾಡಿದ್ದರು? ಎಲ್ಲಿ ನೀರು ಬಿಡಿಸಿದ್ದರು? ಯಾವ ಚಾನೆಲ್ ಮಾಡಿಸಿದ್ದರು? ಅಪಪ್ರಚಾರ ಮಾಡಿ ಚುನಾವಣೆಯಲ್ಲಿ ಗೆದ್ದಿರುವ ಬಸವರಾಜು ಈಗ ನೀರು ಎಲ್ಲಿಂದ ತರುತ್ತಾರೆ ತರಲಿ ಎಂದು ಕಿಡಿಕಾರಿದರು. ದೇವೇಗೌಡರು ಗೆದ್ದಿದ್ರೆ ಕಮಿಟ್ಮೆಂಟ್ ಆದ್ರೂ ಇರೋದು, ಆದ್ರೆ ಈ ಮನುಷ್ಯನಿಗೆ ಏನೂ ಕಮಿಟ್ಮೆಂಟ್ ಇಲ್ಲ. ತುಮಕೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲೂಕುಗಳ ಎಲ್ಲ ಕೆರೆಗಳಿಗೂ ನೀರು ಹರಿಸಲಿ ಎಂದು ಸವಾಲು ಹಾಕಿದರು.

Leave a Reply

Your email address will not be published. Required fields are marked *