ಗೋಲ್‌ಮಾಲ್‌ಗೆ ಶಿಸ್ತುಕ್ರಮ

ಬೆಂಗಳೂರು: ಗರ್ಭೀಣಿಯರು, ಮಕ್ಕಳು ಮತ್ತು ಕಿಶೋರಿಯರಿಗೆ ಅಂಗನವಾಡಿ ಕೇಂದ್ರಗಳಿಂದ ನೀಡುವ ಆಹಾರ ವಿತರಣೆಯಲ್ಲಿ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕೆಂದು ಜಿಪಂ ಅಧ್ಯಕ್ಷೆ ಜಯಮ್ಮ ಅನಿಲ್‌ಕುಮಾರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಶನಿವಾರ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಅಂಗನವಾಡಿಗಳಲ್ಲಿ ಭಾರಿ ಗೋಲ್‌ಮಾಲ್ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಸುಳ್ಳು ಲೆಕ್ಕ ನೀಡಿ ವಂಚಿಸಿದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಸೇರಿ ವಿವಿಧ ಇಲಾಖೆ ಅಭಿವೃದ್ಧಿ ಕಾರ್ಯ ಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಶಾಲೆ ಬಿಟ್ಟ ಮಕ್ಕಳ ಮಾಹಿತಿ ಸಂಗ್ರಹಿಸಿ: ಜಿಲ್ಲೆಯಲ್ಲಿ ಶಾಲೆಗೆ ಬಾರದ ಮಕ್ಕಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಶಾಲೆಗೆ ಗೈರಾಗುವ ಮಕ್ಕಳ ಮಾಹಿತಿ ಸಂಗ್ರಹಿಸಬೇಕು ಎಂದು ಅಧ್ಯಕ್ಷೆ ಜಯಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಕೃಷ್ಣಮೂರ್ತಿ, ಶೇ.97 ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ. ಶಾಲೆ ಬಿಟ್ಟ ಮಕ್ಕಳ ದಾಖಲೆ ಸಂಗ್ರಹ ಪ್ರಕರಣ ಕೋರ್ಟ್‌ನಲ್ಲಿದ್ದು, ಮುಂದಿನ ವಾರ ಇದರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು. ಮಧ್ಯೆ ಪ್ರವೇಶಿಸಿದ ಅಧ್ಯಕ್ಷೆ , ಜಿಲ್ಲೆಯಲ್ಲಿ ಕೇವಲ 17 ಮಕ್ಕಳು ಮಾತ್ರ ಶಾಲೆಯಿಂದ ಹೊರಗುಳಿದಿದ್ದಾರೆ ಎಂದರೆ ನಂಬಲಸಾಧ್ಯ ಎಂದರು.

ಗುತ್ತಿಗೆದಾರರ ವಿಳಂಬ: ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರರಿಗೆ ಸಮರ್ಪಕವಾಗಿ ವೇತನ ನೀಡುತ್ತಿಲ್ಲ. ಇಎಸ್‌ಐ, ಪಿಎಫ್ ಸೌಲಭ್ಯ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವೇತನ ಪಾವತಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಜಯಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ. ರಾಜೇಶ್, ಸರಿಯಾದ ಸಮಯಕ್ಕೆ ಬಿಲ್ ಸಂದಾಯವಾಗುತ್ತಿಲ್ಲ. ಇಲಾಖೆಯಿಂದ ಹಣ ಪಾವತಿಸಲಾಗಿದೆ. ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.

ನರ್ಸರಿ ಗಿಡ ಉತ್ತಮವಾಗಿಲ್ಲ: ಅರಣ್ಯ ಇಲಾಖೆ ಅಗತ್ಯವಿರುವಷ್ಟು ಸಸಿಗಳ ವಿತರಣೆಯಲ್ಲಿ ವಿಲವಾಗಿದೆ. ಶಾಲೆಗಳಲ್ಲಿ ಸಸಿ ನೆಡಲು ಜಾಗಗಳನ್ನು ಗುರುತಿಸಿ ಸಸಿಗಳನ್ನು ಪೋಷಣೆ ಮಾಡುತ್ತಿರುವ ಕುರಿತು ಅಧಿಕಾರಿಗಳು ಗಮನ ನೀಡಬೇಕು ಎಂದು ಅಧ್ಯಕ್ಷೆ ಜಯಮ್ಮ ಸೂಚಿಸಿದರು. ಇದಕ್ಕೆ ದನಿಗೂಡಿಸಿದ ಜಿಪಂ ಉಪ ಕಾರ್ಯದರ್ಶಿ ಕರಿಯಪ್ಪ ಅರಣ್ಯ ಇಲಾಖೆ ನರ್ಸರಿಯಲ್ಲಿ ಬೆಳೆಸುತ್ತಿರುವ ಗಿಡಗಳು ಉತ್ತಮವಾಗಿಲ್ಲ ಎಂಬ ಮಾಹಿತಿ ಇದೆ. ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸೂಚಿಸಿದರು.ಮಕ್ಕಳಲ್ಲಿ ಪರಿಸರ ಹಾಗೂ ಕೈತೋಟ ನಿರ್ವಹಣೆಯ ಅರಿವು ಮೂಡಿಸುವ ಸಲುವಾಗಿ ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳ ಅಂಗಳದಲ್ಲಿ ಸಾವಯವ ಕೈತೋಟ (ಕಿಚನ್ ಗಾರ್ಡನ್) ನಿರ್ಮಾಣಕ್ಕೆ ಆದ್ಯತೆ ನೀಡಿ, ಕ್ರಮ ಕೈಗೊಳ್ಳಬೇಕೆಂದು ಜಯಮ್ಮ ಸೂಚಿಸಿದರು.

ಕಾಲುಬಾಯಿ ಜ್ವರ ಲಸಿಕೆ: ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಳ್ಳುತ್ತಿದ್ದು ಕಾಲುಬಾಯಿ ಜ್ವರಕ್ಕೆ ಸರ್ಕಾರದಿಂದ ಲಸಿಕೆ ಪೂರೈಕೆಯಾಗಿದೆಯೇ, ಎಷ್ಟು ದಾಸ್ತಾನಿದೆ ಎಂದು ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಮಾಹಿತಿ ಕೇಳಿದರು. 6 ತಿಂಗಳಿಗೊಮ್ಮೆ ಲಸಿಕೆ ಹಾಕಲಾಗುತ್ತದೆ. ಫೆಬ್ರವರಿಯಲ್ಲಿ ಲಸಿಕೆ ಹಾಕಲಾಗಿದ್ದು, ಮುಂದಿನ ತಿಂಗಳು ಮತ್ತೆ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.

ವಿದೇಶ ಪ್ರವಾಸ ಬೇಡವೇ?: ಕೃಷಿ ಅಧ್ಯಯನಕ್ಕಾಗಿ ನಮ್ಮ ಜಿಲ್ಲೆಯ ರೈತರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುವ ವ್ಯವಸ್ಥೆ ಆಗಿಲ್ಲ ಎಂದು ಜಿಪಂ ಸದಸ್ಯ ಅಪ್ಪಯ್ಯಣ್ಣ ಸಭೆಯ ಗಮನಕ್ಕೆ ತಂದರು. ಉಪ ಕಾರ್ಯದರ್ಶಿ ಕರಿಯಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ಇತರೆ ಜಿಲ್ಲೆಗಳ ರೈತರ ಜತೆ ನಮ್ಮ ಜಿಲ್ಲೆಯ ರೈತರನ್ನು ಸೇರಿಸಿ ವಿದೇಶ ಪ್ರವಾಸಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಆರೋಗ್ಯ ಸಹಾಯವಾಣಿ ಕೇಂದ್ರ ಸ್ಥಾಪಿಸಿ: ಜಿಲ್ಲೆಯಲ್ಲಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜತೆಗೆ ಆ್ಯಂಬುಲೆನ್ಸ್ ಸೇವೆ ಜತೆಗೆ ವೈದ್ಯರ ಕೊರತೆ ನೀಗಿಸಬೇಕು. ಹಾಗೇ ಜಿಲ್ಲೆಯಲ್ಲಿ ಆರೋಗ್ಯ ಸಹಾಯವಾಣಿ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಇಲಾಖಾಧಿಕಾರಿಗಳಿಗೆ ಅಧ್ಯಕ್ಷೆ ಜಯಮ್ಮ ಸೂಚಿಸಿದರು. ಜಿಲ್ಲೆಯಲ್ಲಿ ಆಂಬ್ಯುಲೆನ್ಸ್‌ಗಳ ಅಭಾವವಿದೆ. ಇತ್ತೀಚಿಗೆ ನಮ್ಮವರೊಬ್ಬರು ಅನಾರೋಗ್ಯಕ್ಕೀಡಾದಾಗ ನಾವೇ ಆಂಬುಲೆನ್ಸ್‌ಗೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಹೇಳಿದರು.

Leave a Reply

Your email address will not be published. Required fields are marked *