ಗೋವಿನಜೋಳ, ಸೋಯಾಬೀನ್ ಬಿತ್ತನೆ

ಬಂಕಾಪುರ: ಎರಡು ದಿನಗಳಿಂದ ಅರಂಭಗೊಂಡಿರುವ ಜಿಟಿ ಜಿಟಿ ಮಳೆಯಿಂದ ಬಂಕಾಪುರ ಹೋಬಳಿ ಭಾಗದ ರೈತ ಸಮೂಹ ಸಂತಸಗೊಂಡಿದ್ದು, ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

ಕಳೆದೆರಡು ದಿನಗಳಿಂದ ಅರಂಭಗೊಂಡಿರುವ ಮುಂಗಾರು ಮಳೆ ನಿರೀಕ್ಷೆಯಷ್ಟು ಆಗಿಲ್ಲ. ಆದರೂ, ಅಲ್ಪ ಮಳೆಗೆ ಭೂಮಿ ಹದಗೊಳಿಸಿರುವ ಹಳೇ ಬಂಕಾಪುರ, ಹುಲಿಕಟ್ಟಿ, ಶಿಡ್ಲಾಪುರ, ಶಿಂಗಾಪುರ, ಮಲ್ಲನಾಯ್ಕನಹಳ್ಳಿ, ಹೋತನಹಳ್ಳಿ, ಹುನಗುಂದ ಭಾಗದ ರೈತರು ಹತ್ತಿ, ಗೋವಿನಜೋಳ, ಸೋಯಾಬೀನ್ ಬಿತ್ತನೆ ಆರಂಭಿಸಿದ್ದಾರೆ. ಆದರೆ ಬಂಕಾಪುರ, ಕುಂದೂರ, ಗುಡ್ಡದಚನ್ನಾಪುರ ಗ್ರಾಮಗಳ ಸುತ್ತಮುತ್ತಲೂ ಎರಿ(ಕಪ್ಪು) ಭೂಮಿ ಹೊಂದಿರುವ ರೈತರು ಇನ್ನಷ್ಟು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಭೂಮಿಯ ತೇವಾಂಶ ಹೆಚ್ಚಾದ ನಂತರ ಬಿತ್ತನೆಗೆ ಮುಂದಾಗಲಿದ್ದಾರೆ.

ರೈತರಿಗೆ ಬೀಜ ಗೊಬ್ಬರದ ತೊಂದರೆಯಾಗದಂತೆ, ಈ ಬಾರಿ ಬಂಕಾಪುರ ರೈತ ಸಂಪರ್ಕದ ಅಧಿಕಾರಿಗಳು ಮುಂಗಾರು ಹಂಗಾಮಿಗೆ ಮುನ್ನವೇ ಬೀಜಗಳನ್ನು ವಿತರಿಸುತ್ತಿದ್ದಾರೆ. ಬಿತ್ತನೆಗೆ ಬೇಕಾಗಿರುವ ಬೀಜಗಳಾದ ಸೋಯಾಬೀನ್, 145 ಟನ್, ಮೆಕ್ಕೆಜೋಳ 12 ಟನ್, ಶೇಂಗಾ 8 ಟನ್, ಭತ್ತ 11 ಟನ್, ಅಲಸಂದಿ 2 ಟನ್, ಹೆಸರು 3 ಟನ್ ಬೀಜ ಹಾಗೂ ಸಾಕಷ್ಟು ರಾಸಾಯನಿಕ ಗೊಬ್ಬರವನ್ನು ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಲಾಗಿದೆ. ರೈತರು ಖಾಸಗಿ ಬೀಜ ಮಾರಾಟ ಮಳಿಗೆಗಳಿಂದಲೂ ಬೀಜ ಖರೀದಿಸುತ್ತಿದ್ದಾರೆ.

ಗೊಣ್ಣೆಹುಳು ಬಾಧೆ ನಿಯಂತ್ರಣಕ್ಕೆ ಸಲಹೆ
ಈ ಬಾರಿಯೂ ಕಡಿಮೆ ಮಳೆಯಾಗುವ ಸೂಚನೆ ಇರುವುದರಿಂದ ಮುಂಗಾರಿ ಹಂಗಾಮಿನಲ್ಲಿ ಗೋವಿನಜೋಳಕ್ಕೆ ಗೊಣ್ಣಹುಳು ಬಾಧೆ ಉಲ್ಭಣವಾಗುವ ಸಾಧ್ಯತೆಗಳಿದ್ದು, ಬೆಳೆಯನ್ನು ರಕ್ಷಿಸಿಕೊಳ್ಳಲು ಸೂಕ್ತ ಬಿಜೋಪಚಾರದ ಅವಶ್ಯಕತೆ ಇದೆ. ಭಾರತ ಕೃಷಿ ಮಂತ್ರಾಲಯದ ಗುಣ ನಿಯಂತ್ರಣ ಪ್ರಾಧಿಕಾರದ ಉಪ ವಿಭಾಗಾಧಿಕಾರಿ ಡಾ. ದಿಲೀಪ್ ಕೆ. ಶ್ರೀವಾತ್ಸವ್ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿರುವಂತೆ ಗೊಣ್ಣೆಹುಳು (ಲದ್ದಿ ಹುಳ) ಆರಂಭಿಕ ಹಂತದಲ್ಲಿಯೇ ನಿಯಂತ್ರಿಸಲು ಸೈಂಟ್ರಾನಿಲಿಪೋ›ಲ್ 19.8% ಮತ್ತು ಥೈಯೋಮೆಥಾಕ್ಸಮ್ 19.8% ಔಷಧದಿಂದ ಕಡ್ಡಾಯವಾಗಿ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಇದರಿಂದ ರೋಗ ಹತೋಟಿ ಮತ್ತು ಉತ್ತಮ ಇಳುವರಿ ಪಡೆಯಬಹುದು ಎಂದು ಬಂಕಾಪುರ ಕೃಷಿ ಅಧಿಕಾರಿ ಅರುಣಕುಮಾರ ಕ್ಯಾಲಕೊಂಡ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *