ಗೋವಿನಜೋಳಕ್ಕೆ ಲದ್ದಿಹುಳು

ಬಂಕಾಪುರ: ಬಂಕಾಪುರ ಹೋಬಳಿ ಭಾಗದಲ್ಲಿ ಗೋವಿನಜೋಳ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಆದರೆ, ಇತ್ತೀಚೆಗೆ ಈ ಬೆಳೆಗೆ ಲದ್ದಿಹುಳದ ಕಾಟ ಜೋರಾಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.

ಇಲ್ಲಿನ ರೈತರು ಮುಂಗಾರು ಮತ್ತು ಹಿಂಗಾರಿನಲ್ಲಿ ನೀರಾವರಿ ಆಶ್ರಿತ ಜಮೀನುಗಳಲ್ಲಿ ಗೋವಿನ ಜೋಳ ಬೆಳೆಯುತ್ತಾರೆ. ಆದರೆ, ಇತ್ತೀಚೆಗೆ ಕಾಣಿಸಿಕೊಂಡಿರುವ ಲದ್ದಿ ಹುಳಗಳ ಹಾವಳಿಗೆ ರೈತರು ತತ್ತರಿಸಿ ಹೋಗಿದ್ದಾರೆ. ಮುಂಗಾರು ಬಿತ್ತನೆಯ ನಂತರ ಅಲ್ಲಲ್ಲಿ ಕಂಡು ಬಂದಿದ್ದ ಈ ಬಾಧೆ ಔಷಧೋಪಚಾರದಿಂದ ನಿಯಂತ್ರಣಕ್ಕೆ ಬಂದಿತ್ತು. ಆದರೆ, ಈಗ ಕಂಡು ಬಂದಿರುವ ಲದ್ದಿಹುಳು ಯಾವುದೇ ಔಷಧೋಪಚಾರದಿಂದಲೂ ನಿಯಂತ್ರಣಕ್ಕೆ ಬರುತ್ತಿಲ್ಲ.

ಹೋಬಳಿ ವ್ಯಾಪ್ತಿಯ ನಾರಾಯಣಪುರ, ಹೊಟ್ಟೂರ, ಮೂಕಬಸರಿಕಟ್ಟಿ, ಮಲ್ಲನಾಯ್ಕನ ಕೊಪ್ಪ, ಶಿಡ್ಲಾಪುರ, ಹುಲಿಕಟ್ಟಿ, ಹಳೇ ಬಂಕಾಪುರ, ನಿಡಗುಂದಿ ಗ್ರಾಮಗಳ ಜಮೀನುಗಳಲ್ಲಿ ಈ ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿದೆ. ನಾರಾಯಣಪುರ ಗ್ರಾಮದ ಬಸವರಾಜ ಹೊನ್ನನ್ನವರ ಮತ್ತು ಅಕ್ಕಪಕ್ಕದವರ ಸುಮಾರು 8-10 ಎಕರೆ ಪ್ರದೇಶದಲ್ಲಿ ಈ ಹುಳುವಿನ ಬಾಧೆ ಕಂಡು ಬಂದಿದ್ದು ನಿಯಂತ್ರಣಕ್ಕೆ ಬಾರದೇ ಸಂಪೂರ್ಣ ಬೆಳೆ ಹಾಳಾಗಿದೆ.

ಮತ್ತಷ್ಟು ವಿಸ್ತರಿಸುವ ಭೀತಿ: ಲದ್ದಿ ಹುಳ ಈಗಾಗಲೇ ಬಂಕಾಪುರ ಹೋಬಳಿ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ತಾಲೂಕಿನ ನಾನಾ ಪ್ರದೇಶಗಳಿಗೆ ವಿಸ್ತರಿಸುವ ಭೀತಿ ಎದುರಾಗಿದೆ. ಈ ಕುರಿತು ಮಾತನಾಡಿದ ರೈತ ಮುಖಂಡ ಜಿ.ಪಂ. ಮಾಜಿ ಸದಸ್ಯ ಶಶಿಧರ ಹೊನ್ನನ್ನವರ, ‘ಕೃಷಿ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ರೋಗ ಬಾಧೆಯ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಿಲ್ಲ. ಖಾಸಗಿ ಕ್ರಿಮಿನಾಶಕ ಕಂಪನಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವ ಇಲಾಖೆಯವರು ಕಚೇರಿಯಲ್ಲಿ ಕುಳಿತು ವೈದ್ಯರಂತೆ ಔಷಧ ಅಂಗಡಿಗಳಿಗೆ ಚೀಟಿ ಬರೆದು ಕೊಡುತ್ತಿದ್ದಾರೆ. ಇದರಿಂದ ರೈತರಿಗೆ ಎಕರೆಗೆ 10ರಿಂದ 15 ಸಾವಿರ ರೂ. ಖರ್ಚು ಬರುತ್ತಿದೆ’ ಎಂದು ಆರೋಪಿಸಿದರು.

ಕೃಷಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೃಷಿ ವಿಜ್ಞಾನಿಗಳ ಜೊತೆ ರ್ಚಚಿಸಿ ಲದ್ದಿಹುಳದ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.ಈಗಾಗಲೇ ಹುಳದ ಬಾಧೆಯಿಂದ ಹಾನಿಯಾಗಿರುವ ಹೊಲಗಳಿಗೆ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಲದ್ದಿಹುಳದ ಬಾಧೆಯ ಬಗೆಗೆ ಈಗಾಗಲೇ ಕೃಷಿ ಇಲಾಖೆ ಆಂದೋಲನದ ಮೂಲಕ ನಿಯಂತ್ರಣದ ಕ್ರಮಗಳ ಕುರಿತು ಸಲಹೆ ನೀಡಿದೆ. ಆದರೂ ಹತೋಟಿಗೆ ಬಂದಿಲ್ಲ. ಮೇಲಧಿಕಾರಿಗಳ ಸಲಹೆ ಪಡೆದು ಇನ್ನೆರಡು ದಿನಗಳಲ್ಲಿ ಕೃಷಿ ವಿಜ್ಞಾನಿಗಳನ್ನು ಕರೆಯಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.

| ಶಂಕ್ರಪ್ಪ ಮುದಕಣ್ಣವರ, ಕೃಷಿ ಅಧಿಕಾರಿ ಬಂಕಾಪುರ

ಈಗಾಗಲೇ ಲದ್ದಿಹುಳದ ಬಾಧೆಯಿಂದ ಹಾಳಾದ ರೈತರ ಹೊಲಗಳಿಗೆ ಭೇಟಿ ನೀಡುತ್ತಿದ್ದೇವೆ. ಈ ಕುರಿತು ನಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.

| ಆರ್.ಎಂ. ನಾಯಕ, ಕಂದಾಯ ನಿರೀಕ್ಷಕ ಬಂಕಾಪುರ ಹೋಬಳಿ