ಗೋವಿನಜೋಳಕ್ಕೆ ಲದ್ದಿಹುಳು ಕಾಟ

ಮುಂಡರಗಿ: ಗೋವಿನಜೋಳ ಬೆಳೆಗೆ ಲದ್ದಿ ಹುಳುಗಳ ಬಾಧೆ ವಿಪರೀತವಾಗಿದ್ದರಿಂದ ಬೇಸತ್ತ ರೈತರು ಬೆಳೆಯನ್ನೇ ಹರಗುವುದಕ್ಕೆ ಮುಂದಾಗಿದ್ದಾರೆ. ಪುರಸಭೆ ವ್ಯಾಪ್ತಿಯ ಶಿರೋಳ ಗ್ರಾಮದ ಕೆಲ ರೈತರು ಗೋವಿನಜೋಳ ಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸಲು ಆಗದೇ ಹರಗುತ್ತಿದ್ದಾರೆ. ಒಂದೂವರೆ ತಿಂಗಳ ಬೆಳೆಗೆ ಲದ್ದಿಹುಳು ಆವರಿಸಿ ಬೆಳೆ ನಾಶ ಮಾಡುತ್ತಿದೆ. ಒಂದು ಗಿಡದಲ್ಲಿ ನಾಲ್ಕಾರು ಹುಳುಗಳಿದ್ದು, ಎಲೆಗಳನ್ನು ತಿಂದು ಹಾಳು ಮಾಡುತ್ತಿವೆ. ಈಗಾಗಲೇ 50ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬೆಳೆಯನ್ನು ರೈತರು ಹರಗಿದ್ದಾರೆ.

ಬೆಳೆ ಉಳಿಸಿಕೊಳ್ಳಲು ರೈತರು ಫೋರೆಟ್ ಔಷಧಿ ಸಿಂಪಡಿಸಿದ್ದಾರೆ ಆದರೂ ಹತೋಟಿಗೆ ಬಂದಿಲ್ಲ. ಗೋವಿನಜೋಳ ಬೆಳೆಯು ರೈತನ ಕೈ ಸೇರುವುದಕ್ಕೆ 3 ತಿಂಗಳು ಬೇಕಾಗುತ್ತದೆ. ಒಂದೂವರೆ ತಿಂಗಳಿಗೆ ಬೆಳೆ ಕುಂಠಿತವಾಗಿ ನಾಶವಾಗುತ್ತಿರುವುದನ್ನು ನೋಡಲಾಗದೆ ಬೇಸತ್ತಿರುವ ರೈತರು ಹರಗಲು ಮುಂದಾಗಿದ್ದಾರೆ.

ಬೀಜ, ಗೊಬ್ಬರ, ಕೂಲಿ, ಮೊದಲಾದ ಖರ್ಚು ಹಿಡಿದು ಒಂದು ಎಕರೆ ಗೋವಿನಜೋಳ ಬೆಳೆಯುವುದಕ್ಕೆ ಕನಿಷ್ಠ 10-12 ಸಾವಿರ ರೂ. ಖರ್ಚು ಮಾಡಿದ್ದಾರೆ. ಈಗ ಒಂದು ಎಕರೆ ಹರಗುವುದಕ್ಕೆ 1200 ರೂ. ಟ್ರ್ಯಾಕ್ಟರ್ ಬಾಡಿಗೆ ಮತ್ತು ರೆಂಟಿ, ಕುಂಟಿ ಹರಗಿ ಮತ್ತೊಂದು ಬೆಳೆ ಬಿತ್ತನೆ ಮಾಡುವುದಕ್ಕೆ ಪುನಃ 12 ಸಾವಿರ ರೂ. ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.

ರೈತನಾಗಿ ಬಾಳುವುದಕ್ಕಿಂತ ಕೂಲಿ ಕೆಲಸ ಮಾಡಿಕೊಂಡು ಬಾಳುವುದೇ ಲೇಸು. ಬೆಳೆ ನಾಶವಾಗುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜವಾಗಿಲ್ಲ. ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ, ರೈತನ ಬೆನ್ನೆಲುಬೆ ಮುರಿದು ಬಿಟ್ಟಿದೆ. ಸಾಲ-ಸೂಲ ಮಾಡಿಕೊಂಡು ಬಿತ್ತನೆ ಮಾಡಿದ ಬೆಳೆಗೆ ಕೀಟಬಾಧೆ ಆವರಿಸಿದೆ.

| ಹನುಮಂತ ಹದಗಾರ, ರೈತ

ಗೋವಿನಜೋಳ ಬೆಳೆಗೆ ರಾಜ್ಯದೆಲ್ಲೆಡೆ ಲದ್ದಿ ಹುಳುವಿನ ಕಾಟ ಇದೆ. ಹುಳು ಕಾಣಿಸಿಕೊಂಡ ಪ್ರಾರಂಭದಲ್ಲೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಅಲ್ಲಿ ಕೊಡುವಂಥ ಫೋರೆಟ್ ಮೊದಲಾದ ಔಷಧಿಗಳನ್ನು ಬೆಳೆಗೆ ಹಾಕುವುದರ ಮೂಲಕ ಅದನ್ನು ತಡೆಗಟ್ಟಬಹುದು. ಖುಷ್ಕಿಭೂಮಿಯಲ್ಲಿ ಬೆಳೆ ಒಣಗಿದರೆ ಪರಿಹಾರ ನೀಡಬಹುದು. ಆದರೆ, ಹುಳುವಿನಿಂದ ನಾಶವಾಗುವ ಬೆಳೆಗೆ ಪರಿಹಾರ ನೀಡುವುದಕ್ಕೆ ಅವಕಾಶವಿಲ್ಲ.

| ಎಸ್.ಬಿ. ನೆಗಳೂರ, ಸಹಾಯಕ ಕೃಷಿ ನಿರ್ದೇಶಕ