ಗೋವಾದಲ್ಲಿ ಕನ್ನಡಕ್ಕಾಗಿ ಅಭಿಯಾನ

ಪಣಜಿ: ವಾಸ್ಕೊ ನಗರದ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಕೊಡಿಸುವಂತೆ ಅಭಿಯಾನ ಆರಂಭವಾಗಿದೆ.

ಅಭಿಯಾನದಲ್ಲಿ ಸ್ಥಳೀಯ ಕನ್ನಡ ಶಾಲೆಗಳ ಶಿಕ್ಷಕರು ಮತ್ತು ಕನ್ನಡಿಗರು ಭಾಗವಹಿಸಿದ್ದು, ವಾಸ್ಕೊದಲ್ಲಿ ಕನ್ನಡಿಗರ ಮನೆ ಮನೆಗೆ ತೆರಳಿ ಪಾಲಕರಲ್ಲಿ ಅರಿವು ಮೂಡಿಸಲಾಗುತ್ತಿದೆ.

ವಿದ್ಯಾರ್ಥಿಗಳ ಕೊರತೆ: ಕಳೆದ ಅನೇಕ ವರ್ಷಗಳಿಂದ ಗೋವಾದಲ್ಲಿ ವಿವಿಧ ಉದ್ಯೋಗಗಳ ಹಿನ್ನೆಲೆಯಲ್ಲಿ ಲಕ್ಷಾಂತರ ಕನ್ನಡಿಗರು ವಾಸಿಸುತ್ತಿದ್ದಾರೆ. ವಾಸ್ಕೊದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ವಾಸವಿದ್ದರು. ಆದರೆ, ಬೈನಾ ಆಪರೇಶನ್ ತೆರವು ಕಾರ್ಯಾಚರಣೆಯಲ್ಲಿ ಸಾವಿರಾರು ಕನ್ನಡಿಗರ ಮನೆಗಳನ್ನು ಸರ್ಕಾರ ತೆರವುಗೊಳಿಸಿದ್ದರಿಂದ ಇಲ್ಲಿದ್ದ ಹೆಚ್ಚಿನ ಕುಟುಂಬಗಳು ಬೇರೆಡೆ ಸ್ಥಳಾಂತರಗೊಂಡರು. ಇದರಿಂದಾಗಿ ಮುರಗಾಂವ ತಾಲೂಕಿನಲ್ಲಿರುವ ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಕೆಲ ಶಾಲೆಗಳನ್ನು ಮುಚ್ಚುವಂತಾಗಿದೆ.

ಸದ್ಯ ವಾಸ್ಕೊ, ಮುರಗಾಂವ ತಾಲೂಕಿನಲ್ಲಿ ಅಂದಾಜು ಏಳು ಕನ್ನಡ ಶಾಲೆಗಳಿವೆ. ಈ ಶಾಲೆಗಳಿಗೂ ಮುಂದೆ ವಿದ್ಯಾರ್ಥಿಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಕನ್ನಡಿಗ ಶಿಕ್ಷಕರಾದ ವಿ.ಟಿ. ಅರೆಬೆಂಚಿ ನೇತೃತ್ವದಲ್ಲಿ ಸೋಮರಾಯ ಲಮಾಣಿ, ಬಾಬು ಪಟೇಲ, ಭೀಮಪ್ಪ ಮೂಲಿಮನಿ, ಕುಮಾರ ಲಮಾಣಿ ಸೇರಿ ಹಲವು ಕನ್ನಡಿಗರು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ಶೈಕ್ಷಣಿಕ ಭವಿಷ್ಯ ಕುಂಠಿತವಾಗಿತ್ತು: 2004ರಿಂದ ಗೋವಾ ಬೈನಾ ಬೀಚ್​ನಲ್ಲಿ ಹಂತ ಹಂತವಾಗಿ ವಿವಿಧ ಕಾರಣ ನೀಡಿ ಗೋವಾ ಸರ್ಕಾರ ಕನ್ನಡಿಗರಿಗೆ ಯಾವುದೇ ಶಾಶ್ವತ ಪುನರ್ವಸತಿ ಕಲ್ಪಿಸದೆ ಸಾವಿರಾರು ಮನೆಗಳನ್ನು ತೆರವುಗೊಳಿಸಿತ್ತು. ಇದರಿಂದಾಗಿ ಎಲ್ಲ ಕನ್ನಡಿಗ ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯ ಕುಂಠಿತವಾಗುವಂತಾಗಿತ್ತು. ಈ ಕಹಿ ಘಟನೆ ಗೋವಾದಲ್ಲಿ ಪದೇಪದೆ ಮರುಕಳಿಸಿರುವುದು ಕನ್ನಡಿಗರ ಪಾಲಿಗೆ ಮರೆಯಲಾಗದ ಕಹಿ ಘಟನೆಯಾಗಿ ಉಳಿದಿದೆ.