ಗೋಲ್ಡನ್ ಸ್ಟಾರ್ ಈಗ ಕಿಲಾಡಿ ಕಳ್ಳ

‘ಗೋಲ್ಡನ್ ಸ್ಟಾರ್’ ಗಣೇಶ್ ಈವರೆಗೆ ನಟಿಸಿರುವ ಸಿನಿಮಾಗಳಲ್ಲಿ ‘ಲವರ್​ಬಾಯ್’ ಅವತಾರದಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಭಗ್ನ ಪ್ರೇಮಿಯಾಗಿ, ರೊಮ್ಯಾಂಟಿಕ್ ಹೀರೋ ಆಗಿ, ದುರಂತ ನಾಯಕನಾಗಿ, ಹಾಸ್ಯದ ಕಚಗುಳಿ ಇಡುವ ಮೂಲಕ ಹೊಸ ಹೊಸ ಗೆಟಪ್​ಗಳಿಂದಲೇ ಪ್ರೇಕ್ಷಕರ ಮುಂದೆ ಎದುರಾಗಿದ್ದರು ಗಣೇಶ್. ಇದೀಗ, ಆ ಪಟ್ಟಿಗೆ ಹೊಸದೊಂದು ಪಾತ್ರ ‘ಆರೆಂಜ್’ ಚಿತ್ರದ ಮೂಲಕ ಸೇರ್ಪಡೆಯಾಗುತ್ತಿದೆ. ಪ್ರಶಾಂತ್ ರಾಜ್ ನಿರ್ದೇಶನದ ‘ಆರೆಂಜ್’ ಸಿನಿಮಾದಲ್ಲಿ ಗಣೇಶ್ ಕಳ್ಳನಾಗಿ ಕಾಣಿಸಿಕೊಂಡಿದ್ದಾರೆ. ಅವರು ನಾಯಕನಾಗಿ ನಟಿಸಿದ ಸಿನಿಮಾಗಳ ಪೈಕಿ ಇದೇ ಮೊದಲ ಬಾರಿಗೆ ಕಿಲಾಡಿ ಕಳ್ಳನ ವೇಷ ಹಾಕಿದ್ದಾರೆ!

ಗಣೇಶ್ ಸಿನಿಮಾ ಅಂದ ಮೇಲೆ ಅಲ್ಲಿ ಹಾಸ್ಯಕ್ಕೆ ಮೊದಲ ಪ್ರಾಶಸ್ಱ. ಆ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಸಿನಿಮಾ ಮಾಡಿದ್ದಾರಂತೆ ನಿರ್ದೇಶಕರು. ‘ಗಣೇಶ್ ಅವರೊಟ್ಟಿಗೆ ಇದು ನನ್ನ ಎರಡನೇ ಸಿನಿಮಾ. ‘ಜೂಮ್​ನಲ್ಲಿ ಯಾವೆಲ್ಲ ಪ್ಲಾ್ಯನ್​ಗಳು ವರ್ಕೌಟ್ ಆಗಿರಲಿಲ್ಲವೋ ಅದನ್ನು ಈ ಸಿನಿಮಾ ಮೂಲಕ ತೋರಿಸಲು ಪ್ರಯತ್ನಪಟ್ಟಿದ್ದೇವೆ. ಹಾಗಂತ ಯಾವುದೂ ಅತಿರೇಕ ಎನಿಸುವುದಿಲ್ಲ. ಹಾಸ್ಯಮಯವಾಗಿ, ಫ್ಯಾಮಿಲಿ ಪ್ರೇಕ್ಷಕರನ್ನು ಗಮನದಲ್ಲಿಟ್ಟಕೊಂಡೆ ಕಥೆಯನ್ನು ಸೃಷ್ಟಿಮಾಡಿದ್ದೇವೆ’ ಎಂದು ಹೇಳಿಕೊಳ್ಳುತ್ತಾರೆ ಪ್ರಶಾಂತ್ ರಾಜ್.

ಚಿತ್ರದ ಶೀರ್ಷಿಕೆಗೂ ಕಥೆಗೂ ಏನಾದರೂ ಸಂಬಂಧ ಇದೆಯಾ? ಈ ಪ್ರಶ್ನೆಗೆ ನಿರ್ದೇಶಕರ ಉತ್ತರ ಹೀಗಿತ್ತು; ‘ಆರೆಂಜ್ ಅಂದ ತಕ್ಷಣ ಎಲ್ಲರ ಗಮನಕ್ಕೆ ಥಟ್ ಅಂತ ಬರುವುದು ಅದೊಂದು ಹಣ್ಣು ಎಂದು. ಆ ಹಣ್ಣಿನಿಂದಲೇ ಒಂದಿಡೀ ಸಿನಿಮಾ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು. ಇದನ್ನು ಹೊರತುಪಡಿಸಿದರೆ, ಬೇರೆ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ನಾಯಕಿಯನ್ನು ನಾಯಕ ಬುಟ್ಟಿಗೆ ಬೀಳಿಸಿಕೊಳ್ಳುತ್ತಾನೆ. ಹೀಗೆ ಹಲವು ಕುತೂಹಲಕರ ವಿಷಯಗಳನ್ನು ಸಿನಿಮಾದಲ್ಲಿ ತೋರಿಸಿದ್ದೇವೆ’ ಎನ್ನುತ್ತಾರೆ.

ಲುಕ್ ವಿಚಾರದಲ್ಲಿ ‘ಆರೆಂಜ್’ನಲ್ಲಿ ಗಣೇಶ್​ಗೆ ಹೆಚ್ಚು ಗೆಟಪ್​ಗಳಿಲ್ಲವಂತೆ. ಈಗಾಗಲೇ ಪೋಸ್ಟರ್​ಗಳಲ್ಲಿ ಕಾಣಿಸಿಕೊಂಡ ರೀತಿಯಲ್ಲಿಯೇ ಇಡೀ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಸಿನಿಮಾ ಆಗಿರುವುದರಿಂದ, ರಂಗಾಯಣ ರಘು, ಸಾಧುಕೋಕಿಲ ಕಾಮಿಡಿಯ ಉಸ್ತುವಾರಿ ಹೊತ್ತಿದ್ದಾರೆ. ಡಬ್ಲ್ಯೂಡಬ್ಲ್ಯೂಇ ಖ್ಯಾತಿಯ ಅಂಡರ್​ಟೇಕರ್ ಗೆಟಪ್​ನಲ್ಲಿ ಸಾಧುಕೋಕಿಲ ಅವರನ್ನು ತೋರಿಸಲಾಗಿದೆಯಂತೆ!

ಹಾಡುಗಳು ಮತ್ತು ಸಾಹಸದ ವಿಷಯದಲ್ಲೂ ಕಥೆ ಬೇಡುವಷ್ಟೇ ಕಂಟೆಂಟ್ ಅಳವಡಿಸಿದ್ದೇವೆ ಎಂಬುದು ಪ್ರಶಾಂತ್ ಮಾತು. ‘ಗಣೇಶ್ ಅವರ ಸಿನಿಮಾಗಳಲ್ಲಿ ಹಾಡುಗಳೇ ಹೈಲೈಟ್. ಅದನ್ನು ಮನದಲ್ಲಿಟ್ಟುಕೊಂಡೆ, ಕಲರ್​ಫುಲ್ ಹಾಡುಗಳನ್ನು ‘ಆರೆಂಜ್’ನಲ್ಲಿ ಕೇಳಬಹುದು. ಸಾಹಸ ದೃಶ್ಯಗಳನ್ನೂ ಹದವಾಗಿ ಬೆರೆಸಿದ್ದೇವೆ. ಇನ್ನೇನು ಈಗಾಗಲೇ ಟ್ರೇಲರ್ ಬಿಡುಗಡೆಯಾಗಿದೆ. ಆಡಿಯೋ ರಿಲೀಸ್ ಮಾಡಿಕೊಳ್ಳುವ ಮೂಲಕ ಶೀಘ್ರ ಪ್ರೇಕ್ಷಕರ ಮುಂದೆ ಮತ್ತೆ ಬರಲಿದ್ದೇವೆ’ ಎಂಬುದು ಪ್ರಶಾಂತ್ ಮಾತು. ಅಂದಹಾಗೆ ‘ಆರೆಂಜ್’ ಚಿತ್ರ ಡಿಸೆಂಬರ್ 7ಕ್ಕೆ ತೆರೆಕಾಣುತ್ತಿದೆ.