ಗೋದಾಮು ಹೊತ್ತುರಿದು ಕಾರ್ವಿುಕ ಸಾವು : ದೇವರಜೀವನಹಳ್ಳಿಯ ಪೀಠೋಪಕರಣ ಮಳಿಗೆಯಲ್ಲಿಯಲ್ಲಿ ದುರಂತ

ಬೆಂಗಳೂರು: ದೇವರಜೀವನಹಳ್ಳಿಯಲ್ಲಿ ಪೀಠೋಪಕರಣ ಗೋದಾಮು ಹೊತ್ತುರಿದಿದ್ದು, ಕಾರ್ವಿುಕನೊಬ್ಬ ಮೃತಪಟ್ಟಿ ದ್ದಾನೆ. ಇತರ ನಾಲ್ವರು ಕಾರ್ವಿುಕರು ಗಾಯಗೊಂಡಿದ್ದಾರೆ.

ಉತ್ತರಪ್ರದೇಶ ಮೂಲದ ಮುಲ್ಲಾರ್ (25) ಮೃತ ಪಟ್ಟವ. ಗುಲ್ಮಾರ್ (24), ನಜೀರ್ (25), ಮುನೀರ್ (25), ಮುಲರಾಪ್ (25) ಗಾಯಗೊಂಡಿದ್ದಾರೆ.

ಡಿ.ಜೆ. ಹಳ್ಳಿ ಉರ್ದು ಶಾಲೆ ಬಳಿ ಮೂರು ಅಂತಸ್ತಿನ ಕಟ್ಟಡದಲ್ಲಿ ಮನ್ಸೂರ್ ಖಾನ್ ಎಂಬಾತ ಗೋದಾಮು ಹೊಂದಿದ್ದ. ಅಲ್ಲಿ ಸೋಫಾ, ಕುರ್ಚಿ, ಹಾಸಿಗೆ, ಮಂಚ ಮುಂತಾದ ವಸ್ತುಗಳನ್ನು ತಯಾರಿಸುತ್ತಿದ್ದ. ಮುಲ್ಲಾರ್ ಸೇರಿ ಉತ್ತರ ಪ್ರದೇಶ ಮೂಲದ 10 ಮಂದಿ ಈ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ವಾಸಿಸುತ್ತಿದ್ದರು. ಶನಿವಾರ ಬೆಳಗಿನ ಜಾವ 4 ಗಂಟೆಯಲ್ಲಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ರಮೇಣ ಗೋದಾಮಿನಲ್ಲಿದ್ದ ಹಾಸಿಗೆ ಹಾಗೂ ಇನ್ನಿತರ ವಸ್ತುಗಳಿಗೆ ಹರಡಿ ಇಡೀ ಗೋದಾಮು ಆವರಿಸಿದೆ. ದುರಂತದಿಂದ ಎಚ್ಚರಗೊಂಡ ಕೆಲ ಕಾರ್ವಿುಕರು ಕೂಡಲೇ ಹೊರಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಗಾಢನಿದ್ದೆಯಲ್ಲಿದ್ದ ನಜೀರ್ ಮತ್ತು ಮುಲ್ಲಾರ್ ಹೊರ ಬರಲಾಗದೆ ಸಿಲುಕಿದ್ದರು. ಪ್ರಾಣರಕ್ಷಣೆಗಾಗಿ ಇಬ್ಬರೂ ಗೋದಾಮಿನೊಳಗಿದ್ದ ಸ್ನಾನದ ಕೋಣೆಗೆ ಹೋಗಿ ಚಿಲಕ ಹಾಕಿಕೊಂಡಿದ್ದರು. ಆದರೆ, ಗೋದಾಮಿಗೆ ಆವರಿಸಿದ್ದ ಹೊಗೆ ಸ್ನಾನದ ಕೋಣೆಗೆ ಆವರಿಸಿ ಇಬ್ಬರಿಗೂ ಉಸಿರಾಟದ ತೊಂದರೆ ಉಂಟಾಗಿತ್ತು.

ಗೋದಾಮಿಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. 2 ವಾಹನಗಳಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ನಾನದ ಕೋಣೆಯ ಬಾಗಿಲು ಒಡೆದು ಒಳಹೋದಾಗ ನಜೀರ್ ಮತ್ತು ಮುಲ್ಲಾರ್ ಅಸ್ವಸ್ಥಗೊಂಡಿದ್ದರು. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮುಲ್ಲಾರ್ ಮೃತಪಟ್ಟಿದ್ದಾನೆ. ಡಿ.ಜೆ. ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *