ಗೋಕುಲ ರಸ್ತೆಗೆ ಮತ್ತೆ ಕೋಟಿ ಕೋಟಿ…

ಹುಬ್ಬಳ್ಳಿ: ಹೊಸೂರಿನಿಂದ ಗೋಕುಲ ರಸ್ತೆ ವಿಮಾನ ನಿಲ್ದಾಣದವರೆಗೆ 5 ಕಿ.ಮೀ. ಉದ್ದದಲ್ಲಿ ಬಹುಭಾಗ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ವಣವಾಗಿದೆ. ಅದಕ್ಕೆ ಈಗಾಗಲೇ ಹಲವು ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದೀಗ ಸ್ಮಾರ್ಟ್ ರಸ್ತೆ ಹೆಸರಿನಲ್ಲಿ ಅದೇ ರಸ್ತೆಗೆ 43 ಕೋಟಿ ರೂ. ಸುರಿಯಲು ಯೋಜನೆ ರೂಪಿಸಲಾಗಿದೆ!

ಇಲ್ಲಿ ಹೊಸದಾಗಿ ರಸ್ತೆ ನಿರ್ಮಾಣ ಮಾಡಲಾಗುವುದಿಲ್ಲ. ಈಗಾಗಲೇ ಉತ್ತಮ ಗುಣಮಟ್ಟದಲ್ಲಿ ಸಿಮೆಂಟ್ ರಸ್ತೆ ನಿರ್ವಣವಾಗಿದೆ. ವಿದ್ಯುತ್ ಮಾರ್ಗವನ್ನು ಭೂಗತ ಕೇಬಲ್​ಗೆ ಪರಿವರ್ತಿಸುವುದು, ರೋಡ್ ಮಾರ್ಕಿಂಗ್, ಫುಟ್​ಪಾತ್-ಜಂಕ್ಷನ್-ರಸ್ತೆ ವಿಭಜಕ ಸುಧಾರಣೆ, ಗಟಾರ ನಿರ್ವಣಕ್ಕೆ ಈ ಮೊತ್ತ (43 ಕೋಟಿ ರೂ.) ವಿನಿಯೋಗವಾಗಲಿದೆ. ಕೇವಲ ಇಷ್ಟಕ್ಕೆ 43 ಕೋಟಿ ರೂ. ಎಂಬುದು ಹುಬ್ಬೇರಿಸುವಂತೆ ಮಾಡಿದೆ.

ಹು-ಧಾ ಸ್ಮಾರ್ಟ್ ಸಿಟಿ ಯೋಜನೆಯಡಿ 43 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದು ಸೇರಿದಂತೆ ಸ್ಮಾರ್ಟ್ ರಸ್ತೆಯ 6 ಪ್ಯಾಕೇಜ್​ಗಳಲ್ಲಿ ಟೆಂಡರ್ ಕರೆಯಲಾಗುತ್ತಿದೆ. ‘ಸ್ಮಾರ್ಟ್ ಸಿಟಿ ಹೆಸರಿನಲ್ಲಿ ದುಂದು ವೆಚ್ಚ ನಡೆಸಿದ್ದಾರೆ. ಇವರು ಏನು ಮಾಡಲು ಹೊರಟಿದ್ದಾರೆ ಎಂಬುದು ತಿಳಿಯುತ್ತಿಲ್ಲ. ನಿಖರವಾಗಿ ಖರ್ಚು ವೆಚ್ಚ ಲೆಕ್ಕಕ್ಕೆ ಸಿಗುವುದಿಲ್ಲ. ಎಷ್ಟೇ ಸ್ಮಾರ್ಟ್ ಸ್ಮಾರ್ಟ್ ಎಂದರೂ ಯೋಜನಾ ವೆಚ್ಚ ವಿಪರೀತ ಅಧಿಕ ಎನಿಸುತ್ತಿದೆ’ ಎಂದು ಇಂಜಿನಿಯರ್ ಸುರೇಶ ಕಿರೇಸೂರ ಅಭಿಪ್ರಾಯಿಸಿದ್ದಾರೆ.

ಹು-ಧಾ ದಲ್ಲಿ ರಸ್ತೆ ನಿರ್ವಣಕ್ಕೆ ಸುರಿಯುವ ಹಣಕ್ಕೆ ಲೆಕ್ಕವಿಲ್ಲ. ಟೆಂಡರ್ ಶ್ಯೂರ್ ರಸ್ತೆ ಹೆಸರಿನಲ್ಲೂ 40 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಹೊಸೂರಿನಿಂದ ವಿಮಾನ ನಿಲ್ದಾಣದವರೆಗೆ ಹೊಸದಾಗಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಇದ್ದರೂ 43 ಕೋಟಿ ರೂ. ಯಾಕೆ? ಬಹುತೇಕ ರಸ್ತೆಯ ಎರಡೂ ಕಡೆ ಹೊಸದಾಗಿ ನಿರ್ವಿುಸಿದ ಗಟಾರವೂ ಇದೆ. ಹೀಗಿರುವಾಗ ಕೇವಲ ವಿದ್ಯುತ್ ಮಾರ್ಗವನ್ನು ಭೂಗತಗೊಳಿಸುವ, ರೋಡ್ ಮಾರ್ಕಿಂಗ್, ಫುಟ್​ಪಾತ್-ಜಂಕ್ಷನ್-ರಸ್ತೆ ವಿಭಜಕ ಸುಧಾರಣೆ ಕೆಲಸಕ್ಕೆ 43 ಕೋಟಿ ರೂ. ಬೇಕಾ?

‘ಈ ರಸ್ತೆಯ ಕಾರ್ಯಾಚರಣೆ ಹಾಗೂ ನಿರ್ವಹಣೆ ಅವಧಿ 5 ವರ್ಷಗಳದ್ದು. ಈ ಅವಧಿಯಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾದಲ್ಲಿ ಗುತ್ತಿಗೆದಾರರು ಸ್ಪಂದಿಸಲಿದ್ದಾರೆ. ಸದ್ಯದಲ್ಲೇ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು’ ಎಂದು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್​ನ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ತಿಳಿಸಿದ್ದಾರೆ.

ಇವು ಸ್ಮಾರ್ಟ್ ರಸ್ತೆಗಳು

1. ಹೊಸುರು ಜಂಕ್ಷನ್- ಗೋಕುಲ ರಸ್ತೆ ವಿಮಾನ ನಿಲ್ದಾಣ—-43 ಕೋಟಿ ರೂ.

2. ಬ್ರಾಡ್​ವೇ, ದುರ್ಗದಬೈಲ್, ಸ್ಟೇಷನ್ ರಸ್ತೆ, ಕೊಪ್ಪಿಕರ ರಸ್ತೆ, ಕೊಯಿನ್ ರಸ್ತೆ, ಮರಾಠಾಗಲ್ಲಿ, ಸಿಬಿಟಿ ರಸ್ತೆ, ಜೆಸಿನಗರ ರಸ್ತೆಯವರೆಗೆ –43 ಕೋಟಿ ರೂ.

3. ದಾಜಿಬಾನಪೇಟ-ಘಂಟಿಕೇರಿ ಪೊಲೀಸ್ ಠಾಣೆ-ಬಂಕಾಪುರ ಚೌಕ; ಬಂಕಾಪುರ ಚೌಕ-ರಾಣಿ ಚನ್ನಮ್ಮ ವೃತ್ತ-ಬಟರ್ ಮಾರ್ಕೆಟ್, ಬೂಸಪೇಟ ಮತ್ತು ಮೂರುಸಾವಿರ ಮಠದವರೆಗೆ, ಗ್ಲಾಸ್​ಹೌಸ್-ರಾಣಿ ಚನ್ನಮ್ಮ ವೃತ್ತ-ಬಾಸೆಲ್ ಮಿಷನ್ ಶಾಲೆ, ಕಮರಿಪೇಟ ಪೊಲೀಸ್ ಠಾಣೆ-ತುಳಜಾ ಭವಾನಿ ದೇವಸ್ಥಾನದವರೆಗೆ–42.5 ಕೋಟಿ ರೂ.

4. ಗೋಕುಲ ರಸ್ತೆ ತತ್ವದರ್ಶ ಆಸ್ಪತ್ರೆ-ಇಂಡಸ್ಟ್ರಿಯಲ್ ಗೇಟ್ ನಂ. 1 ಮತ್ತು 2 ರವರೆಗೆ —20 ಕೋಟಿ ರೂ.

5. ತೋಳನಕೆರೆ-ರೇಣುಕಾನಗರ-ಕುಮಾರ ಪಾರ್ಕ್-ಗಾಂಧಿನಗರ, ಕೆಇಸಿ ಬಸ್ ನಿಲ್ದಾಣ-ಅಶೋಕವನ ಬಸ್ ನಿಲ್ದಾಣ-ಗಂಗಿಮೂರ್ತಿ ಬಸ್ ನಿಲ್ದಾಣ-ಸೆಂಟ್ರಲ್ ಎಕ್ಸೈಜ್ ಕಾಲೋನಿ-ರಾಮಲಿಂಗೇಶ್ವರ ನಗರ ಬಸ್ ನಿಲ್ದಾಣ, ಮಂಜುನಾಥ ನಗರ ಕ್ರಾಸ್ ಬಸ್ ನಿಲ್ದಾಣ-ರೇಣುಕಾನಗರ ಜಂಕ್ಷನ್-ರಾಮಲಿಂಗೇಶ್ವರನಗರ ಮುಖ್ಯ ರಸ್ತೆ–30 ಕೋಟಿ ರೂ.

6. ಮಂಜುನಾಥನಗರ-ಜೆಪಿ ನಗರ ಪಾರ್ಕ್-ಕೆಬಿಎನ್ ಕಾಲೋನಿ ರಸ್ತೆ-ಸಿಲ್ವರ್ ಟೌನ್ ರಸ್ತೆ-ಲಕ್ಷ್ಮಿ ಪಾರ್ಕ್-ಡಾಲರ್ಸ್ ಕಾಲೋನಿ ಪಾರ್ಕ್–36.5 ಕೋಟಿ ರೂ.