ರಾಯಚೂರು: ಕಿಡಿಗೇಡಿಗಳ ಗುಂಪೊಂದು ಚಲಿಸುತ್ತಿದ್ದ ಬಸ್‌ಗಳು ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಬಳಿ ಸೋಮವಾರ ತಡರಾತ್ರಿ ನಡೆದಿದೆ.
ಚಿತ್ತಾಪೂರದಿಂದ ದಾವಣಗೆರೆ, ಬೀದರ್‌ನಿಂದ ಬಳ್ಳಾರಿ ಹಾಗೂ ಔರಾದ್‌ದಿಂದ ಬಳ್ಳಾರಿ ಕಡೆಗೆ ಹೊರಟಿದ್ದ ಬಸ್‌ಗಳು ಹಾಗೂ ಖಾಸಗಿ ವಾಹನಗಳಿಗೆ ಹಾಣಿಯಾಗಿದ್ದು, ಗೊಲ್ಲಪಲ್ಲಿ ಬಳಿ ರಾತ್ರಿ 1.30ರ ಸುಮಾರಿಗೆ ಕಿಡಿಗೇಡಿಗಳ ಗುಂಪು ದುರುದ್ದೇಶ ಕಾರಣದಿಂದ ಕಲ್ಲು ತೂರಿ ವಾಹನಗಳನ್ನು ನಿಲ್ಲಿಸಲು ಯತ್ನಿಸಿದ್ದಾರೆ.
ಬಸ್‌ಗಳಿಗೆ ಕಲ್ಲು ಬಿದ್ದೊಡನೆ ಬಸ್ ಚಾಲಕರು ವಾಹನಗಳನ್ನು ನಿಲ್ಲಿಸದೇ ಗುರುಗುಂಟಾ ಗ್ರಾಮಕ್ಕೆ ತಂದಿದ್ದಾರೆ. ಬಸ್‌ಗಳ ಗಾಜುಗಳು ಒಡೆದಿದ್ದು, ಬಸ್‌ಗಳಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.
ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೊಲ್ಲಪಲ್ಲಿ ಬಳಿ ವಾಹನಗಳಿಗೆ ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ಕಲ್ಲು ತೂರಾಟ ನಡೆಸಿರುವುದಾಗಿ ಮಾಹಿತಿ ಬಂದಿದ್ದು, ಆ ಸಮಯದಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು. |ಎಂ.ಪುಟ್ಟಮಾದಯ್ಯ, ಎಸ್ಪಿ ರಾಯಚೂರು