ಗೊಜನೂರ ಸರ್ಕಾರಿ ಪ್ರೌಢಶಾಲೆಗೆ ಪ್ರಶಸ್ತಿ

ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಸರ್ಕಾರಿ ಪ್ರೌಢಶಾಲೆ ಇದೀಗ ಸತತ 2ನೇ ವರ್ಷವೂ ವಂಡರ್​ಲಾ ಎನ್ವಿರಾನ್​ವೆುಂಟ್ ಮತ್ತು ಎನರ್ಜಿ ಕನ್ಸರ್ವೆಷನ್ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಂಗಳೂರಿನ ವಂಡರ್ ಲಾ ಹಾಲಿಡೇಸ್ ಸಂಸ್ಥೆ ನೀಡುವ ಈ ಪ್ರಶಸ್ತಿಯನ್ನು 2010ರಿಂದ ಕರ್ನಾಟಕ ಮತ್ತು ತಮಿಳುನಾಡಿನ ಶಾಲೆಗಳಿಗೆ ಕೊಡಲಾಗುತ್ತಿದೆ. ಪ್ರಸಕ್ತ ವರ್ಷ ಪ್ರತಿಷ್ಠಿತ ಖಾಸಗಿ, ಅನುದಾನಿತ ಮತ್ತು ಸರ್ಕಾರಿ 150ಕ್ಕೂ ಹೆಚ್ಚು ಶಾಲೆಗಳು ಪಾಲ್ಗೊಂಡಿದ್ದವು. ಎಲ್ಲ ಮಾನದಂಡಗಳಲ್ಲಿಯೂ ಆಯ್ಕೆದಾರರ ಗಮನ ಸೆಳೆದು ವಿಶೇಷ ಪ್ರಶಸ್ತಿಯನ್ನು ಗೊಜನೂರ ಶಾಲೆ ಪಡೆದಿದೆ.

2016ರ ಮಿಸ್ ಯುನಿವರ್ಸ್ ಆಫ್ ಇಂಡಿಯಾ ಪ್ರಶಸ್ತಿ ವಿಜೇತೆ ರೋಶ್ಮಿತ ಹರಿಮೂರ್ತಿ ಪ್ರಶಸ್ತಿ ವಿತರಿಸಿದರು. ಗೋ ಗ್ರೀನ್, ಸೇವ್ ನೇಚರ್ ಕಾರ್ಯಕ್ರಮಗಳ ಮೂಲಕ ಹಸಿರು ಜಗತ್ತು ನಿರ್ವಿುಸುವ ಮತ್ತು ಶಾಲಾ ಮಕ್ಕಳಲ್ಲಿ ಪರಿಸರ ಕಾಳಜಿ, ಸ್ವಚ್ಛ ಭಾರತ ಕಲ್ಪನೆ ಬಿತ್ತರಿಸುವ ಶಾಲೆಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಜೋಸೆಫ್ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಹಸಿರು ಸೇನಾನಿಗಳು ಎಂದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಡ್ವೈಜರ್ ರಾಜಗೋಪಾಲನ್ ವಿ., ಪಾರ್ಕ್​ನ ಮುಖ್ಯಸ್ಥ ಮಹೇಶ ಎಂ.ಬಿ., ಮ್ಯಾನೇಜಿಂಗ್ ಡೈರಕ್ಟರ್ ಸಂತೋಷ, ರವಿಕುಮಾರ, ಶ್ರೀನಿವಾಸ, ಶಿಕ್ಷಕಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ವಂಡರ್ ಲಾ ಹಾಲಿಡೇಸ್ ಸಂಸ್ಥೆ ನೀಡುವ ಪರಿಸರ ಸ್ನೇಹಿ ಹಾಗೂ ತಂತ್ರಜ್ಞಾನ ಆಧಾರಿತ ಪ್ರಶಸ್ತಿಯು 15000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ಒಳಗೊಂಡಿದೆ. ಶಾಲಾ ಮಕ್ಕಳಲ್ಲಿ ಸಾವಯವ ಕೃಷಿ, ಪರಿಸರ ಪ್ರೇಮ, ಶಕ್ತಿ ಉಳಿತಾಯ, ಸ್ವಚ್ಛತೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಯುವ ಮನಸ್ಸುಗಳಲ್ಲಿ ಜಾಗೃತಿ ಮೂಡಿಸುವ ಮಕ್ಕಳ ಸ್ನೇಹಿ ಜೀವನ ವಿಧಾನ ಅಳವಡಿಸಿಕೊಳ್ಳುವಲ್ಲಿ ಈ ಪ್ರಶಸ್ತಿ ಉತ್ತೇಜನ ನೀಡುತ್ತದೆ.

ರವಿ ಬ. ಬೆಂಚಳ್ಳಿ ಗೊಜನೂರ ಸರ್ಕಾರಿ ಶಾಲೆ ಮುಖ್ಯಾಧ್ಯಾಪಕ

Leave a Reply

Your email address will not be published. Required fields are marked *