ಗೊಂಬೆಯಾಟದಿಂದ ಪರಿಣಾಮಕಾರಿ ಸಂವಹನ

ಮುಂಡರಗಿ: ಸಾಂಪ್ರದಾಯಿಕ ಗೊಂಬೆಯಾಟ ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿಯನ್ನು ವೃದ್ಧಿಸುತ್ತದೆ. ಸೃಜನಶೀಲ ಮಾಧ್ಯಮವಾಗಿರುವ ಗೊಂಬೆಯಾಟದಂತಹ ಜಾನಪದ ಕಲೆಗಳ ಮೂಲಕ ಸಂವಹನ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಮಕ್ಕಳ ಸಾಹಿತಿ ಡಾ.ನಿಂಗು ಸೊಲಗಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬೆಳಗಾವಿಯ ಸೇವಕ ಸಂಸ್ಥೆಯು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಙಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ ಆಶ್ರಯದಲ್ಲಿ ವಿಜ್ಞಾನ ಪದವೀಧರರು, ವಿಜ್ಞಾನ ಶಿಕ್ಷಕರು ಹಾಗೂ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಗುರುವಾರ ಏರ್ಪಡಿಸಿದ್ದ ಮೂರು ದಿನದ ಸಾಂಪ್ರದಾಯಿಕ ಗೊಂಬೆಯಾಟಗಳ ಮೂಲಕ ವಿಜ್ಞಾನ ಸಂವಹನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಪ್ರದಾಯಿಕ ಜಾನಪದ ಕಲೆಗಳು ನಮ್ಮ ಜನರನ್ನು ಬಹಳವಾಗಿ ಆಕರ್ಷಿಸುತ್ತವೆ. ಆ ಮೂಲಕ ವಿಜ್ಞಾನ ಸಂವಹನವು ಸಮಾಜದಲ್ಲಿ ಬೇರೂರಿರುವ ಮೂಢನಂಬಿಕೆ, ಆರೋಗ್ಯ ಹಾಗೂ ದೈನಂದಿನ ಜೀವನಕ್ಕೆ ಸಂಬಂಧಿತ ತಪ್ಪು ಕಲ್ಪನೆಗಳ ನಿವಾರಣೆಗಾಗಿ ಗೊಂಬೆಯಾಟದಂತಹ ಜಾನಪದ ಮಾಧ್ಯಮ ಬಳಕೆ ಅವಶ್ಯಕ ಎಂದರು.

ಬೆಳಗಾವಿ ಸೇವಕ ಸಂಸ್ಥೆ ಕಾರ್ಯದರ್ಶಿ ಆನಂದ ಲೋಬೊ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಚಿದಾನಂದ ವಡ್ಡರ ಮಾತನಾಡಿದರು. ಹಿರಿಯ ಉಪನ್ಯಾಸಕ ಎಸ್.ಕೆ.ಹೊಳೆಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಮಲ್ಲಿಕಾ ನಾಯಕ, ಪ್ರಾಚಾರ್ಯ ಎಂ.ಎನ್.ಹಲವಾಗಲಿ, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಗೊಂಬೆಯಾಟ ತಜ್ಞ ಸಿದ್ದಪ್ಪ ಬಿರಾದಾರ, ರಂಗಾಯಾಣ, ನೀನಾಸಂನ ರಂಗ ಭೂಮಿ ನಿರ್ದೇಶಕರಾದ ಗಣೇಶ ಹೆಗ್ಗೋಡು ಮತ್ತು ಸುನಂದಾ ನಿಂಬನಗೌಡರ ಇದ್ದರು. ಕಾರ್ಯಾಗಾರದಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೊಂಬೆಯಾಟ ತಂಡದಿಂದ ಗೊಂಬೆಯಾಟ ಪ್ರದರ್ಶನ ಏರ್ಪಡಿಸಲಾಗಿತ್ತು. ತರಬೇತಿ ಕಾರ್ಯಗಾರದಲ್ಲಿ ಎಂಬತ್ತು ಜನ ಪಾಲ್ಗೊಂಡಿದ್ದಾರೆ.

 

Leave a Reply

Your email address will not be published. Required fields are marked *