ಗೊಂದಲದ ಗೂಡಾದ ಆರ್​ಟಿಇ

ಹುಬ್ಬಳ್ಳಿ: ಆನ್​ಲೈನ್ ತಂತ್ರಾಂಶದ ಎಡವಟ್ಟಿನಿಂದಾಗಿ ಆರ್​ಟಿಇ (ಶಿಕ್ಷಣ ಹಕ್ಕು ಕಾಯ್ದೆ) ಅಡಿ ಖಾಸಗಿ ಶಾಲೆಗಳಿಗೆ ಪ್ರವೇಶಾತಿ ಬಯಸಿ ಅರ್ಜಿ ಸಲ್ಲಿಕೆಗೆ ಮುಂದಾಗಿರುವ ಪಾಲಕರಿಗೆ ನಿರಾಸೆಯಾಗುತ್ತಿದೆ. ಪ್ರಸಕ್ತ ಸಾಲಿನ ಆರ್​ಟಿಇ ಅರ್ಜಿ ಸ್ವೀಕಾರ ಪ್ರಕಿಯೆ ಗುರುವಾರದಿಂದ ಆರಂಭವಾಗಿದ್ದರೂ ಧಾರವಾಡ ಜಿಲ್ಲೆಯಲ್ಲಿ ಆರ್​ಟಿಇ ತಂತ್ರಾಂಶ ಅಪ್​ಡೇಟ್ ಆಗಿಲ್ಲ. ಇದರಿಂದ ಅರ್ಜಿ ಸಲ್ಲಿಕೆಗೆ ಆಸೆಗಣ್ಣಿನಿಂದ ಬಂದ ಪಾಲಕರು ವಿಫಲಯತ್ನ ನಡೆಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರದ ವಾರ್ಡ್​ಗಳಿಗೆ ಪೂರಕವಾದ ನಗರ ಹಾಗೂ ಶಾಲೆಗಳ ಪಟ್ಟಿ ಆರ್​ಟಿಇ ತಂತ್ರಾಂಶದಲ್ಲಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಲು ಬರುವ ಪಾಲಕರಿಗೆ ತಮ್ಮ ಪ್ರದೇಶವೂ ಸಿಗದೇ, ತಮ್ಮ ವ್ಯಾಪ್ತಿಯ ಶಾಲೆಗಳೂ ಸಿಗದೇ ಗೊಂದಲಕ್ಕೀಡಾಗಿ ಶಿಕ್ಷಣ ಇಲಾಖೆಯನ್ನು ಶಪಿಸುತ್ತಿದ್ದಾರೆ.

ಈ ಕುರಿತಂತೆ ಆರ್​ಟಿಇ ಸಂಯೋಜಕರಿಗೆ ಪಾಲಕರು ದೂರುತ್ತಿದ್ದಾರೆ. ‘ಯಾವ ವಾರ್ಡ್​ನಲ್ಲಿ ಯಾವ ಪ್ರದೇಶ ಇಲ್ಲ ? ಏನು ಸಮಸ್ಯೆಯಾಗಿದೆ ಎಂದು ಬರೆದು ಕೊಡಿ ನಾವು ಆರ್​ಟಿಇ ಸೆಲ್​ಗೆ ಕಳುಹಿಸುತ್ತೇವೆ’ ಎಂದು ಅಧಿಕಾರಿಗಳು ಪಾಲಕರನ್ನು ಸಾಗ ಹಾಕುತ್ತಿದ್ದಾರೆ. ಏತನ್ಮಧ್ಯೆ ತಂತ್ರಾಂಶದ ದೋಷ ಹಾಗೂ ವ್ಯವಸ್ಥೆ ವಿರುದ್ಧ ಪಾಲಕರಿಂದ ಹೆಚ್ಚುತ್ತಿರುವ ವಿರೋಧಕ್ಕೆ ಅಧಿಕಾರಿಗಳು ಮಣಿದಿದ್ದಾರೆ. ಧಾರವಾಡ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಆರ್​ಟಿಇ ಸಂಯೋಜಕರು ತಂತ್ರಾಂಶ ದೋಷ ಸರಿಪಡಿಸುವುದಕ್ಕೆ ಬೆಂಗಳೂರಿಗೆ ತೆರಳಿದ್ದಾರೆ. ಒಂದೆರಡು ದಿನಗಳಲ್ಲಿ ತಂತ್ರಾಂಶದ ಸಮಸ್ಯೆ ಬಗೆಹರಿಯಲಿದೆ ಎಂದು ಅಧಿಕಾರಿಗಳು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಮುಳುವಾದ ಹೊಸ ನಿಯಮ:‘ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಲಭ್ಯವಿಲ್ಲದಿದ್ದಲ್ಲಿ ಮಾತ್ರ ಖಾಸಗಿ ಶಾಲೆಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ’ ಎಂಬ ಸರ್ಕಾರದ ಪ್ರಸಕ್ತ ಸಾಲಿನ ನಿಯಮ ಪಾಲಕರಿಗೆ ಮುಳುವಾಗಿದೆ. ಹೊಸ ನಿಯಮದಿಂದ ಧಾರವಾಡ ಜಿಲ್ಲೆಗೆ ಕೆಲವೇ ಆರ್​ಟಿಇ ಸೀಟುಗಳು ಲಭ್ಯವಾಗುತ್ತಿದೆ. ಇದಕ್ಕೆ ಪಾಲಕರ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರಿ ಶಾಲೆಗಳಿದ್ದಲ್ಲಿ ಆರ್​ಟಿಇ ಸೀಟುಗಳಿಲ್ಲ ಎಂದಾದರೆ ಆರ್​ಟಿಇ ಜಾರಿಯಾಗಿದ್ದಾದರೂ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಕಳೆದ ವರ್ಷ ಆರ್​ಟಿಯಡಿ ಸುಮಾರು 2 ಲಕ್ಷ ಸೀಟು ಲಭ್ಯವಿದ್ದವು. ಹೊಸ ನಿಯಮದಿಂದಾಗಿ ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ ರಾಜ್ಯಕ್ಕೆ ಕೇವಲ 5-10 ಸಾವಿರ ಸೀಟುಗಳು ಮಾತ್ರ ಲಭ್ಯವಿವೆ. ಜಿಲ್ಲೆಗೆ ಎಷ್ಟು ಸೀಟುಗಳು ಲಭ್ಯವಿವೆ ಎಂದು ಅಧಿಕಾರಿಗಳನ್ನು ಕೇಳಿದಾಗ ತಂತ್ರಾಂಶದಲ್ಲೇ ಗೊತ್ತಾಗುತ್ತದೆ ಎಂದು ಜಾರಿಕೊಳ್ಳುತ್ತಾರೆ. ಕೆಲವರು ಬಹಳ ಕಡಿಮೆ ಸೀಟುಗಳಿವೆ ಎಂದು ಉತ್ತರಿಸುತ್ತಾರೆ.

ಕುಂದಗೋಳ, ಕಲಘಟಗಿಯಲ್ಲಿ ಒಂದೂ ಇಲ್ಲ:ಸರ್ಕಾರದ ಹೊಸ ನಿಯಮದಿಂದಾಗಿ ಕುಂದಗೋಳ, ಕಲಘಟಗಿ, ಧಾರವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಆರ್​ಟಿಇ ಸೀಟುಗಳೇ ಲಭ್ಯವಿಲ್ಲ. ಅಂದರೆ ಇವೆರಡು ತಾಲೂಕುಗಳಲ್ಲಿ ಒಂದು ಕಿ.ಮೀ. ಗೊಂದರಂತೆ ಸರ್ಕಾರಿ ಶಾಲೆಗಳಿರುವುದರಿಂದ ಖಾಸಗಿ ಶಾಲೆಗಳಲ್ಲಿ ಆರ್​ಟಿಇ ಅಡಿ ಸೀಟು ಪಡೆಯುವುದಕ್ಕೆ ಅವಕಾಶ ಇಲ್ಲ. ನವಲಗುಂದದಲ್ಲಿ ರೋಟರಿ ಶಾಲೆ, ಜೈಂಟ್ಸ್ ಶಾಲೆ ಹಾಗೂ ಹೆಬ್ಬಾಳ ಕ್ರಾಸ್ ಬಳಿಯ ಖಾಸಗಿ ಶಾಲೆ ಮಾತ್ರ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಿದ್ದು, ಒಟ್ಟು 36 ಸೀಟು ಲಭ್ಯವಿವೆ. ಧಾರವಾಡ ಗ್ರಾಮೀಣ ವ್ಯಾಪ್ತಿಯಲ್ಲಿ 9-10 ಖಾಸಗಿ ಶಾಲೆಗಳು, ಹುಬ್ಬಳ್ಳಿ ಶಹರದಲ್ಲಿ 14 ಸಾಲೆಗಳು ಮಾತ್ರ ಅನ್ವಯಿಸುತ್ತವೆ. ಹುಬ್ಬಳ್ಳಿ ಗ್ರಾಮೀಣ ವ್ಯಾಪ್ತಿಯಲ್ಲಿ ಕೇವಲ ಒಂದು ಶಾಲೆ ಅನ್ವಯಿಸುತ್ತದೆ.

ಅರ್ಜಿ ಸಲ್ಲಿಕೆ ಎಲ್ಲಿ?: ತಾಲೂಕು ಮತ್ತು ಹೋಬಳಿ ಮಟ್ಟದ ಅಟಲಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆರ್​ಟಿಇ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಬಗ್ಗೆ ಗೊಂದವಿದ್ದಲ್ಲಿ ಬಿಇಒ ಕಚೇರಿ ಆರ್​ಟಿಇ ಕೇಂದ್ರ ಹೋಗಿ ಸಲ್ಲಿಸಬಹುದು.

ಆರ್​ಟಿಇ ಅಡಿ ಅರ್ಜಿ ಸಲ್ಲಿಸಲು ಬಿಇಒ ಕಚೇರಿಗೆ ಬಂದಿದ್ದ ಪಾಲಕರು, ಹೊಸ ನಿಯಮ ಬದಲಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಪ್ರತಿಭಟಿಸಿದರು.

ತಂತ್ರಾಂಶದ ದೋಷ ಸರಿಪಡಿಸುವುದಕ್ಕೆ ಜಿಲ್ಲೆಯ ಆರ್​ಟಿಇ ಸಂಯೋಜಕರು ಬೆಂಗಳೂರಿಗೆ ತೆರಳಿದ್ದಾರೆ. ಕೆಲವು ದಿನಗಳಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ. ಜಿಲ್ಲೆಗೆ ಎಷ್ಟು ಸೀಟು ಎನ್ನುವುದು ಗೊತ್ತಾಗುತ್ತದೆ.
ಗಜಾನನ ಮನ್ನಿಕೇರಿ, ಡಿಡಿಪಿಐ

ಆರ್​ಟಿಇ ಹೊಸ ನಿಯಮ ಕಾನೂನಿಗೆ ವಿರುದ್ಧವಾಗಿದೆ. ಇದರಿಂದ ಗ್ರಾಮೀಣ ಬಡ ಮಕ್ಕಳು ಯೋಜನೆಯಿಂದ ವಂಚಿತರಾಗಿದ್ದಾರೆ. ಹೊಸ ನಿಯಮ ರದ್ದು ಪಡಿಸಬೇಕು.
ಡಿ.ಸಿ. ರಂಗರಡ್ಡಿ, ವಿದ್ಯಾರ್ಥಿಗಳ ಪಾಲಕರ ಟ್ರಸ್ಟ್ ಅಧ್ಯಕ್ಷ