ಗೆಲ್ಲುವ ಕುದುರೆಗಳಿಗೆ ಹುಡುಕಾಟ

ನರೇಗಲ್ಲ: ಪಟ್ಟಣ ಪಂಚಾಯಿತಿಗೆ ಚುನಾವಣೆ ಅಖಾಡ ರಂಗೇರುತ್ತಿದೆ. ಬಹುತೇಕ ಕಡೆ ಮೀಸಲಾತಿ ಪೀಕಲಾಟ ತಂದಿಟ್ಟಿದ್ದು, ಪುರಪಿತೃಗಳಾಗುವ ಕನಸು ಕಂಡಿದ್ದ ಹಲವರಿಗೆ ನಿರಾಸೆಯಾಗಿದೆ. ಅಲ್ಲದೆ, ಕೆಲ ಮಾಜಿ ಸದಸ್ಯರ ಸ್ಪರ್ಧೆಗೂ ಮೀಸಲಾತಿ ತಲೆನೋವಾಗಿ ಪರಿಣಮಿಸಿದೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಬಿಜೆಪಿ ಗೆಲ್ಲುವ ಕುದುರೆಗಳಿಗಾಗಿ ಶೋಧ ನಡೆಸುತ್ತಿವೆ.

ಕೆಲ ವಾರ್ಡ್​ಗಳಲ್ಲಿ ಎಲ್ಲ ಪಕ್ಷಗಳಲ್ಲೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಆಕಾಂಕ್ಷಿಗಳು ಕೂಡ ಶಾಸಕರು, ಪಕ್ಷದ ಅಧ್ಯಕ್ಷರ ಬಳಿ ಟಿಕೆಟ್​ಗೆ ದುಂಬಾಲು ಬಿದ್ದಿದ್ದಾರೆ. ಇದುವರೆಗೆ ಮನೆ, ನೀರಿನ ಕಂದಾಯ ಕಟ್ಟದ ಆಕಾಂಕ್ಷಿಗಳು ಹಣ ಬಾಕಿ ತುಂಬುತ್ತಿದ್ದು, ಪಟ್ಟಣ ಪಂಚಾಯಿತಿಗೆ ಹಣವೂ ಹರಿದು ಬರುತ್ತಿದೆ. ಆಕಾಂಕ್ಷಿಗಳ ಹಾಗೂ ಸೂಚಕ, ಅನುಮೋದಕರ ಮನೆ ಕರವನ್ನು ಆಕಾಂಕ್ಷಿಗಳೇ ಕಟ್ಟುತ್ತಿದ್ದಾರೆ.

17 ಸದಸ್ಯ ಬಲದ ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಚುನಾವಣೆಯಲ್ಲಿ 8 ಬಿಜೆಪಿ, 2 ಪಕ್ಷೇತರ, 1 ಕೆಜೆಪಿ, 6 ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. 2 ಪಕ್ಷೇತರ ಅಭ್ಯರ್ಥಿಗಳು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪರಿಣಾಮವಾಗಿ, ಚುನಾವಣೆ ನಂತರ ಅವರು ಕಾಂಗ್ರೆಸ್​ಗೆ ಬೆಂಬಲ ನೀಡಿದರು. ಕೆಜೆಪಿ ಅಭ್ಯರ್ಥಿಯು ಸಹ ಕಾಂಗ್ರೆಸ್ ಬೆಂಬಲಿಸಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಪಡೆದಿದ್ದರು. ಕಳೆದ ಐದು ವರ್ಷದ ಅವಧಿಯಲ್ಲಿ ನಾಲ್ವರು ಅಧ್ಯಕ್ಷರು ಹಾಗೂ ಮೂವರು ಉಪಾಧ್ಯಕ್ಷರು ಆಡಳಿತ ನಡೆಸಿದ್ದಾರೆ.

ಮತದಾರರ ವಿವರ: ನರೇಗಲ್ಲ ಪಟ್ಟಣ ಪಂಚಾಯಿತಿಯು ಪಟ್ಟಣ ಸೇರಿದಂತೆ ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ ಗ್ರಾಮವನ್ನು ಒಳಗೊಂಡಿದೆ. 2011 ರ ಜನಗಣತಿ ಪ್ರಕಾರ ನರೇಗಲ್ಲ 16724 ಜನಸಂಖ್ಯೆ ಹೊಂದಿದ್ದು, 6649 ಪುರುಷ ಮತದಾರರು ಹಾಗೂ 6695 ಮಹಿಳಾ ಮತದಾರರು ಸೇರಿ 13345 ಮತದಾರರಿದ್ದಾರೆ. ಸ್ವಾತಂತ್ರ್ಯ ನಂತರ 1990ರ ವರೆಗೆ ಪುರಸಭೆಯಾಗಿದ್ದ ನರೇಗಲ್ಲ ನಂತರ 1990-1996ರ ವರೆಗೆ ನಗರಸಭೆಯಾಗಿ, 15 ವಾರ್ಡ್​ಗಳನ್ನು ಹೊಂದಿತ್ತು. 1996ರಿಂದ ಪಟ್ಟಣ ಪಂಚಾಯಿತಿಯಾಗಿ 17 ವಾರ್ಡ್​ಗಳಾಗಿ ಮಾರ್ಪಾಡಾಗಿದೆ.

ಕೈಕೊಟ್ಟ ಮೀಸಲಾತಿ: ಕಳೆದ ಬಾರಿ ಸದಸ್ಯರಾಗಿದ್ದ 5 ಕ್ಕೂ ಅಧಿಕ ಸದಸ್ಯರು ಮತ್ತೆ ಚುನಾವಣೆಗೆ ನಿಲ್ಲುವ ತಯಾರಿಯಲ್ಲಿದ್ದು, ತೆರೆ ಮರೆಯಲ್ಲಿ ಕಸರತ್ತು ಪ್ರಾರಂಭಿಸಿದ್ದರು. ಆದರೆ, ಮೀಸಲಾತಿ ಬದಲಾವಣೆಯಾಗಿ ಸ್ಪರ್ಧೆಯಿಂದ ಅವಕಾಶ ವಂಚಿತರಾಗಿದ್ದಾರೆ. ಕೆಲವರು ತಮ್ಮ ಪತ್ನಿಯನ್ನು ಸ್ಪರ್ಧೆಗೆ ಇಳಿಸಲು ಪ್ರಯತ್ನಿಸುತ್ತಿದಾರೆ.

ಬಿಜೆಪಿ ಟಿಕೆಟ್​ಗೆ ಹೆಚ್ಚಿದ ಬೇಡಿಕೆ: ಬಹುತೇಕ ವಾರ್ಡ್ ಗಳಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಕೆಲ ವಾರ್ಡ್​ಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಟಿಕೆಟ್​ಗಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಟಿಕೆಟ್ ವಂಚಿತರಾದ ನಂತರ ಮತ್ತೆ ಕಾಂಗ್ರೆಸ್​ನತ್ತ ಅವರು ಮರಳಲಿದ್ದಾರೆ ಎನ್ನಲಾಗುತ್ತಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ಟಿಕೆಟ್ ಹಂಚಿಕೆ ತಲೆ ನೋವಾಗುವುದರ ಜತೆಗೆ ಬಂಡಾಯದ ಭೀತಿ ಶುರುವಾಗಿದೆ. ಕಳೆದ 3 ಅವಧಿಯ ಪಟ್ಟಣ ಪಂಚಾಯಿತಿಯಲ್ಲಿ ಎರಡು ಬಾರಿ ಕಾಂಗ್ರೆಸ್ ಒಂದು ಬಾರಿ ಬಿಜೆಪಿ ಆಡಳಿತ ನಡೆಸಿದ್ದು, ಎರಡು ಪಕ್ಷಗಳು ಶತಾಯಗತಾಯ ಅಧಿಕಾರದ ಗದ್ದುಗೆ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಸಹ ಇಲ್ಲಿ ಮಾತ್ರ ಲೆಕ್ಕಕ್ಕಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ವಂಚಿತರಿಗೆ ಟಿಕೆಟ್ ನೀಡುವ ಮೂಲಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದ್ದ ಜೆಡಿಎಸ್ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತಿದೆ.

ನರೇಗಲ್ಲ ಪಟ್ಟಣ ಪಂಚಾಯಿತಿಯ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲಿದೆ. ಈ ಹಿಂದೆ ಸಚಿವರಾಗಿ, ಶಾಸಕರಾಗಿ ಕಳಕಪ್ಪ ಬಂಡಿ ಮಾಡಿರುವ ಅತ್ಯುತ್ತಮ ಕಾರ್ಯಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ, ಸಾಧನೆ ನಮ್ಮ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಿದೆ. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಾಗಿದ್ದು, ಅಂತಿಮವಾಗಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು.

| ಉಮೇಶ ಸಂಗನಾಳಮಠ ಬಿಜೆಪಿ ಘಟಕಾಧ್ಯಕ್ಷ.

ನರೇಗಲ್ಲ ಪಟ್ಟಣ ಪಂಚಾಯಿತಿಯು ಕಾಂಗ್ರೆಸ್ ಭದ್ರ ಕೋಟೆಯಾಗಿದ್ದು, ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮಾಜಿ ಶಾಸಕ ಜಿ.ಎಸ್. ಪಾಟೀಲ ಅವರ ಅಧಿಕಾರವಧಿಯಲ್ಲಿ ಹೆಚ್ಚಿನ ಅನುದಾನವನ್ನು ನರೇಗಲ್ಲ ಅಭಿವೃದ್ಧಿಗಾಗಿ ನೀಡಿದ್ದಾರೆ. ಸಾಮಾನ್ಯ ಜನರ ಒಲವು ಕಾಂಗ್ರೆಸ್ ಪಕ್ಷಕ್ಕಿದ್ದು, ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸವಿದೆ. ಎಲ್ಲ 17 ವಾರ್ಡ್​ಗಳಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಉತ್ತಮರಿಗೆ ಟಿಕೆಟ್ ನೀಡಿ, ಅವರ ಗೆಲುವಿಗೆ ಪ್ರಯತ್ನಿಸಲಾಗುತ್ತದೆ.

| ಬಸನಗೌಡ ಪೊಲೀಸ್ ಪಾಟೀಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

 

ಚುರುಕುಗೊಂಡ ಚುನಾವಣೆ ಪ್ರಕ್ರಿಯೆ

ಮುಳಗುಂದ: ಪಟ್ಟಣದ ಸ್ಥಳೀಯ ಸಂಸ್ಥೆ ಚುನಾವಣೆಗೆ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ. ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಜೋರಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಆಯಾ ಪಕ್ಷಗಳ ಮುಖಂಡರು ಹರಸಾಹಸ ಪಡುತ್ತಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಆಕಾಂಕ್ಷಿಗಳು ಟಿಕೆಟ್​ಗಾಗಿ ಪೈಪೋಟಿ ನಡೆಸಿದ್ದಾರೆ. ಒಂದೆಡೆ ಕಾಂಗ್ರೆಸ್ ಹಾಗೂ ಬಿಜೆಪಿ 19 ವಾರ್ಡ್​ಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಯತ್ನ ನಡೆಸಿದ್ದು, ಎಲ್ಲ ವಾರ್ಡ್​ಗಳಲ್ಲಿಯೂ ತ್ರಿಕೋನ ಸ್ಪರ್ಧೆ ಏರ್ಪಡುವ ಲಕ್ಷಣಗಳು ಗೋಚರಿಸುತ್ತಿವೆ. 8 ನೇ ವಾರ್ಡ್​ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಇಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇಲ್ಲಿ ಬಿಜೆಪಿಯ ಪ್ರಬಲ ವ್ಯಕ್ತಿಯನ್ನು ಕಣಕ್ಕಿಳಿಸಲು ತಯಾರಿ ನಡೆಸಿದ್ದು, ಆ ವಾರ್ಡ್​ನಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳು ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಕಳೆದ ಬಾರಿ ಚುನಾಯಿತರಾದ ಅಭ್ಯರ್ಥಿಗಳು ಈ ಬಾರಿ ವಾರ್ಡ್​ಗಳ ಮೀಸಲಾತಿ ಬದಲಾಗಿರುವುದರಿಂದ ಹಳೆಯ ಸದಸ್ಯರು ಕೂಡಾ ಕಣಕ್ಕಿಳಿಯುವ ಸಾಧ್ಯತೆಗಳು ವಿರಳವಾಗಿವೆ.

ಎಲ್ಲರ ಚಿತ್ತ ಬಡ್ನಿಯತ್ತ: ಕಾಂಗ್ರೆಸ್ ಭದ್ರಕೋಟೆಯಾದ ಪಟ್ಟಣ ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಆ ಕೋಟೆಯನ್ನು ಛಿದ್ರಗೊಳಿಸುವ ಹುನ್ನಾರ ನಡೆಸಿವೆ. ಆದರೂ ಧೃತಿಗೆಡದ ಕಾಂಗ್ರೆಸ್ ತನ್ನದೇ ಪ್ರಾಬಲ್ಯ ಸಾಧಿಸುವ ಪ್ರಯತ್ನ ಮುಂದುವರಿಸಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಗದಗ ಎಪಿಎಂಸಿಯ ಅಧ್ಯಕ್ಷ ಸಿ.ಬಿ. ಬಡ್ನಿಯವರತ್ತ ಎಲ್ಲರ ಚಿತ್ತ ನೆಟ್ಟಿದೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಯಾರನ್ನು ಕಣಕ್ಕಿಳಿಸಬಹುದು ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಇವರ ಆಯ್ಕೆಯ ಆಧಾರದ ಮೇಲೆ ಇತರ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹುಡುಕಾಟ ಶುರುವಾಗಿದೆ.

Leave a Reply

Your email address will not be published. Required fields are marked *