ಗೆಲುವು ಅನಂತವೋ…ಆನಂದವೋ..

ಕಾರವಾರ: 17 ನೇ ಲೋಕಸಭೆಗೆ ಉತ್ತರ ಕನ್ನಡವನ್ನು ಪ್ರತಿನಿಧಿಸುವವರ್ಯಾರು..?ಎಂಬ ಪ್ರಶ್ನೆಗೆ ಮೇ 23 ರಂದು ಉತ್ತರ ದೊರೆಯಲಿದೆ. ಸರಿಯಾಗಿ 1 ತಿಂಗಳ ಹಿಂದೆ (ಏ.23) ರಂದು ಮತದಾನ ನಡೆದಿತ್ತು. ಮೇ 23 ರಂದು ಮತ ಎಣಿಕೆಗೆ ಕ್ಷಣ ಗಣನೆ ಪ್ರಾರಂಭವಾಗಿದ್ದು, ಅಭ್ಯರ್ಥಿಗಳ ಎದೆಯಲ್ಲಿ ಢವಢವ ಪ್ರಾರಂಭವಾಗಿದೆ. ಅನಂತಕುಮಾರ ಹೆಗಡೆ ಐದು ಬಾರಿ ಉತ್ತರ ಕನ್ನಡದ ಸಂಸದರಾಗಿ ಈ ಅವಧಿಗೆ ಕೇಂದ್ರ ಸರ್ಕಾರದ ರಾಜ್ಯ ಖಾತೆ ಸಚಿವ ಹುದ್ದೆಯನ್ನೂ ಪಡೆದಿದ್ದರಿಂದ ಕ್ಷೇತ್ರ ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ಫಲಿತಾಂಶ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಕ್ಷೇತ್ರದಲ್ಲಿ 13 ಅಭ್ಯರ್ಥಿಗಳಿದ್ದರೂ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ ಹೆಗಡೆ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ನಡುವೆ ನೇರ ಪೈಪೋಟಿ ಇತ್ತು. ಇಬ್ಬರೂ ಅಭ್ಯರ್ಥಿಗಳ ನಡುವಿನ ವಾಕ್ಸಮರ ಕಣವನ್ನು ರಂಗೇರಿಸಿತ್ತು. ಅನಂತ ಕುಮಾರ ಹೆಗಡೆ ಈ ಬಾರಿ ಮತ್ತೆ ಗೆದ್ದರೆ 6 ನೇ ಬಾರಿಗೆ ಸಂಸದರಾಗಲಿದ್ದಾರೆ. ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ ಜಿ.ದೇವರಾಯ ನಾಯ್ಕ ಅವರ ಸಾಧನೆಯನ್ನು ಸರಿಗಟ್ಟಲಿದ್ದಾರೆ. ಆನಂದ ಅಸ್ನೋಟಿಕರ್ ಗೆದ್ದರೆ ಉತ್ತರ ಕನ್ನಡ ಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್​ನ ಮೊದಲ ಸಂಸದ ಎನ್ನಿಸಿಕೊಳ್ಳಲಿದ್ದಾರೆ.

ಅಂತರದ ಲೆಕ್ಕಾಚಾರ

ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಪರವಾಗಿ ಸ್ವತಃ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗಮಿಸಿ ಪ್ರಚಾರ ನಡೆಸಿದ್ದರು. ಅವರ ಪ್ರಚಾರ ಎಷ್ಟು ಫಲ ನೀಡಲಿದೆ ಎಂದು ಕಾದು ನೋಡಬೇಕಿದೆ. ಅಭ್ಯರ್ಥಿ ಆನಂದ ಅಸ್ನೋಟಿಕರ್ ಹಾಗೂ ಅವರ ಕೆಲವು ಕಟ್ಟಾ ಅಭಿಮಾನಿಗಳು ತಾವೇ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೊರತುಪಡಿಸಿ ಬಿಜೆಪಿಯಿಂದ ಯಾವುದೇ ಸ್ಟಾರ್ ಪ್ರಚಾರಕರು ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ಕೈಗೊಂಡಿಲ್ಲ. ಆದರೂ ಮೋದಿ ಅಲೆಯ ಪ್ರಭಾವದಿಂದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಗೆಲುವು ಖಚಿತ ಎಂದು ಪಕ್ಷದ ಕಾರ್ಯಕರ್ತರು ನಿಶ್ಚಿಯಿಸಿದ್ದಾರೆ. ಎಷ್ಟು ಅಂತರದಿಂದ ಹೆಗಡೆ ಗೆಲ್ಲಲಿದ್ದಾರೆ ಎಂಬ ಲೆಕ್ಕಾಚಾರ ಶುರು ಮಾಡಿಕೊಂಡಿದ್ದಾರೆ. ಅನಂತ ಕುಮಾರ ಹೆಗಡೆ ಗೆಲುವಿಗೂ ಮುಂಚೆಯೇ ಜಿಲ್ಲೆಯೆಲ್ಲೆಡೆ ಪಕ್ಷದ ಕಾರ್ಯಕರ್ತರನ್ನು ಸೇರಿಸಿ ಅಭಿನಂದನಾ ಸಭೆಗಳನ್ನು ನಡೆಸಿದ್ದಾರೆ. ಸಮೀಕ್ಷೆಗಳೂ ಬಿಜೆಪಿ ಗೆಲ್ಲಲಿದೆ ಎನ್ನುತ್ತಿದೆ. ಆದರೆ, ಇವೆಲ್ಲದಕ್ಕೂ ಮೇ 23 ರ ಮಧ್ಯಾಹ್ನವೇ ಉತ್ತರ ದೊರೆಯಲಿದೆ.

Leave a Reply

Your email address will not be published. Required fields are marked *