ಯಾದಗಿರಿ: ನೇತಾಜಿ ಸುಭಾಶ್ಚಂದ್ರ ಬೋಸ್ ಜಯಂತಿ ಹಾಗೂ ಲಿ.ವಿಶ್ವನಾಥರಡ್ಡಿ ಮುದ್ನಾಳ್ ಜನ್ಮದಿನದ ನಿಮಿತ್ತ ನೇತಾಜಿ ಸಮಿತಿಯಿಂದ ಆಯೋಜಿಸಿದ್ದ ಓಪನ್ ಟೆನಿಸ್ ಕ್ರಿಕೆಟ್ನ ಅಂತಿಮ ಪಂದ್ಯದಲ್ಲಿ ಇಲ್ಲಿನ ಜೈ ಹನುಮಾನ್ ಜ್ಯೂನಿಯರ್ ತಂಡ ಗೆಲುವಿನ ನಗೆ ಬೀರಿತು.
ನಗರಸಭೆ ಸದಸ್ಯೆ ಪ್ರಭಾವತಿ ಮಾರುತಿ ಕಲಾಲರ ಫ್ರಾಂಚೈಸಿ ತಂಡ, ಜೈ ಹನುಮಾನ್ ಸಿನಿಯರ್ ತಂಡವನ್ನು ಫೈನಲ್ನಲ್ಲಿ ಸೋಲಿಸಿ, 1 ಲಕ್ಷ ರೂ.ನಗದು ಹಾಗು ಕಪ್ ತನ್ನದಾಗಿಸಿಕೊಂಡಿತು. ಇನ್ನೂ ರನ್ನರ್ ಅಪ್ಗೆ ಭಾಜನವಾದ ಜೈ ಹನುಮಾನ್ ಸಿನಿಯರ್ ತಂಡ, 51 ಸಾವಿರ ರೂ.ನಗದು ಮತ್ತು ಬಹುಮಾನ ಪಡೆದುಕೊಂಡಿದೆ.
ಅಂತಿಮ ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ವೆಂಕಟರಡ್ಡಿ ಮುದ್ನಾಳ್, ಯುವಕರಿಗೆ ಕ್ರೀಡೆಗಳಲ್ಲಿ ಆಸಕ್ತಿ ಮೂಡಲಿ ಎಂಬ ಕಾರಣಕ್ಕೆ ಸಮಿತಿಯಿಂದ ಒಂದು ತಿಂಗಳ ಪರ್ಯಂತ ಯಾದಗಿರಿ ಹಾಗೂ ಗುರುಮಠಕಲ್ ಕ್ಷೇತ್ರದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಶೀಘ್ರದಲ್ಲೇ ನಗರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಗುವುದು ಎಂದರು.ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್, ಸಮಿತಿ ಅಧ್ಯಕ್ಷ ಮಹೇಶರಡ್ಡಿ ಮುದ್ನಾಳ್, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಯುಡಾ ಅಧ್ಯಕ್ಷ ರುದ್ರಗೌಡ ಪಾಟೀಲ್ ಇದ್ದರು.