ನಾಗಮಂಗಲ: ಕಾಂಗ್ರೆಸ್ ಗೆದ್ದರೆ ಕಾಂಗ್ರೆಸ್ ಜತೆ, ಬಿಜೆಪಿ ಗೆದ್ದರೆ ಬಿಜೆಪಿ ಜತೆ ಹೋಗುವ ಜೆಡಿಎಸ್‌ಗೆ ಯಾವುದೇ ತತ್ವ ಸಿದ್ಧಾಂತವಿಲ್ಲ. ಗೆದ್ದೆತ್ತಿನ ಬಾಲ ಹಿಡಿಯುವುದಷ್ಟೇ ಜೆಡಿಎಸ್‌ನ ತತ್ವ ಸಿದ್ಧಾಂತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಪಟ್ಟಣದ ಟಿಬಿ ಬಡಾವಣೆಯ ಬಡಗೂಡಮ್ಮದೇವಿ ದೇವಸ್ಥಾನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಪರ ಮತಯಾಚಿಸಿದ ಮಾತನಾಡಿದರು.
ಬಿಜೆಪಿ ಜತೆ ಮೈತ್ರಿ ಮಾಡಿಸಿ ಚಲುವರಾಯಸ್ವಾಮಿ ಒಂದು ಬಾರಿ ಎಚ್ಡಿಕೆಯನ್ನು ಸಿಎಂ ಮಾಡಿ ತಪ್ಪು ಮಾಡಿಬಿಟ್ಟಿದ್ದಾನೆ. ಕಳೆದ ಬಾರಿ ಬಿಜೆಪಿಯನ್ನು ದೂರವಿಡಲು ನಾವು ಅವರಿಗೆ ಬೆಂಬಲ ಕೊಟ್ಟು ಸಿಎಂ ಮಾಡಿದ್ದೆವು. ಆದರೆ ಕುಮಾರಸ್ವಾಮಿ ಬೇಜವಾಬ್ದಾರಿಯಿಂದ ಸರ್ಕಾರವನ್ನು ಕಳೆದುಕೊಂಡು ನನ್ನ ಮೇಲೆ ಗೂಬೆ ಕೂರಿಸಿದರು ಎಂದು ದೂರಿದರು.
ಜೆಡಿಎಸ್‌ನವರು ಯಾವುದೇ ಪಕ್ಷಕ್ಕೂ ಬಹುಮತ ಬಾರದಂತೆ ದಿನನಿತ್ಯ ಪೂಜೆ, ಹೋಮ ಮಾಡಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕುಮಾರಸ್ವಾಮಿಯೇ ಕಾರಣ. ಸಿದ್ದರಾಮಯ್ಯ ಅವರಿಂದ ಸರ್ಕಾರ ಹೊರಟು ಹೋಯ್ತು ಅಂತಾರೆ. ಇವರಿಗೆ ಅಮೆರಿಕ, ತಾಜ್ ವೆಸ್ಟೆಂಡ್‌ನಲ್ಲಿ ಕುಳಿತುಕೊಳ್ಳಿ ಅಂತ ನಾನು ಹೇಳಿದ್ನಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಈ ಬಾರಿ 20 ರಿಂದ 25 ಸೀಟು ತೆಗೆದುಕೊಳ್ಳುತ್ತಾರೆ ಅಷ್ಟೇ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿ ಎಂದು ಮನವಿ ಮಾಡಿದರು.
ಪ್ರಸ್ತುತ ಬಿಜೆಪಿಯವರು ಬಡವರ ರಕ್ತ ಕುಡಿಯುತ್ತಿದ್ದು, ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ. 4 ವರ್ಷದಲ್ಲಿ ಬಿಜೆಪಿ ಸರ್ಕಾರ ಒಂದೇ ಒಂದು ಮನೆ ಸಹ ಹೊಸದಾಗಿ ಮಂಜೂರು ಮಾಡಲಿಲ್ಲ. ನಾನು ಸಿಎಂ ಆಗಿದ್ದಾಗ 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೆ. ಆದರೆ ನಾವು ಕಟ್ಟಿಸಿದ ಮನೆಗಳಿಗೆ ಬಾಕಿ ಬಿಲ್ ಕೂಡ ಕೊಟ್ಟಿಲ್ಲ. ಇತಿಹಾಸದಲ್ಲಿ ಇಷ್ಟೊಂದು ಭ್ರಷ್ಟ ಸರ್ಕಾರ ಯಾವತ್ತು ಬಂದಿರಲಿಲ್ಲ. ಜನರಿಗೆ ಬಿಜೆಪಿ ಮೇಲೆ ಬಹಳ ಬೇಸರವಿದ್ದು, ಈ ಬಾರಿ 100ಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬಂದೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಎಂಎಲ್ಸಿ ಬಿ.ರಾಮಕೃಷ್ಣ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಬೆಟ್ಟೇಗೌಡ, ನಿರ್ದೇಶಕ ಮೂಡ್ಯಚಂದ್ರು, ಮನ್ಮುಲ್ ಮಾಜಿ ಅಧ್ಯಕ್ಷರಾದ ತಮ್ಮಯ್ಯ, ಜವರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾಶ್ರೀಕಾಂತ್, ಮುಖಂಡರಾದ ಪ್ರಸನ್ನ, ಎಚ್.ಟಿ.ಕೃಷ್ಣೇಗೌಡ, ದಿವಾಕರ್ ಮತ್ತಿತರಿದ್ದರು.