ಗೃಹ ಸಂಬಂಧಿ ಸಮಸ್ಯೆಗಳಿಗೆ ಹೌಸ್​ಜಾಯ್ ಪರಿಹಾರ

  • ಐ. ಎನ್. ಬಾಲಸುಬ್ರಹ್ಮಣ್ಯ

ಭಾರತದ ಸ್ಟಾರ್ಟ್​ಅಪ್​ಗಳ ಜಗತ್ತಿನಲ್ಲಿ ಆನ್-ಡಿಮಾಂಡ್ ಹೋಮ್ ಸರ್ವೀಸಸ್ ಕ್ಷೇತ್ರ ಅಂದರೆ, ಬೇಡಿಕೆಗನುಗುಣವಾಗಿ ಮನೆ ಬಾಗಿಲಿಗೇ ಅಗತ್ಯ ಸೇವೆಗಳನ್ನು ಒದಗಿಸುವ ನವೋದ್ಯಮಗಳು ಸಾಕಷ್ಟು ಸದ್ದು ಮಾಡುತ್ತಿವೆ. ಈ ಕ್ಷೇತ್ರದಲ್ಲಿ ಬೆಂಗಳೂರು ಮೂಲದ ಹೌಸ್​ಜಾಯ್ ತನ್ನ ವಿಭಿನ್ನ ಕಾರ್ಯಚಟುವಟಿಕೆಗಳ ಮೂಲಕ ಯಶಸ್ವಿಯಾಗಿ ಮನ್ನಡೆಯುತ್ತಿದೆ. ಮನೆಯಲ್ಲಿ ಸೋರುತ್ತಿರುವ ನಲ್ಲಿ, ಎಲೆಕ್ಟ್ರಿಕ್ ಲೈನ್​ನಲ್ಲಿನ ಸಮಸ್ಯೆಗಳಿದ್ದಲ್ಲಿ ಹೀಗೆ ನಿತ್ಯ ಎದುರಾಗುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗ್ರಾಹಕರು ಅನೇಕ ತಂತ್ರಜ್ಞರನ್ನು ಅವಲಂಬಿಸಬೇಕಾಗುತ್ತದೆ.

ಆದರೆ ತಂತ್ರಜ್ಞರು ಸುಲಭವಾಗಿ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಅವರು ಹೇಳಿದ ಸಮಯಕ್ಕೆ ಬಾರದೇ ಇರುವುದು, ಸಮಸ್ಯೆಗೆ ಸಮರ್ಪಕ ಪರಿಹಾರ ನೀಡದಿರುವುದು, ಅನಿಯಮಿತ ದರ ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಅವರಿಂದಾಗುವ ತೊಂದರೆಗೆ ಯಾರನ್ನೂ ಹೊಣೆಗಾರರನ್ನಾಗಿಸಲಾಗುವುದಿಲ್ಲ. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಅದಕ್ಕೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ, ಎಲ್ಲ ಸೇವೆಗಳನ್ನೂ ಒದಗಿಸುವ ತಂತ್ರಜ್ಞರನ್ನು ಒಂದೇ ವೇದಿಕೆಯಲ್ಲಿ ತಂದು ಗ್ರಾಹಕರ ಬೇಡಿಕೆಗನುಗುಣವಾಗಿ ಆ ಸೇವೆಗಳನ್ನು ನೀಡುತ್ತಿದೆ ಹೌಸ್​ಜಾಯ್.

ಹೌಸ್​ಜಾಯ್ 2014ರ ಅಂತ್ಯದಲ್ಲಿ ಸುನೀಲ್ ಗೋಯಲ್ ಹಾಗೂ ಅರ್ಜುನ್ ಕುಮಾರ್​ರಿಂದ ಆರಂಭವಾದ ನವೋದ್ಯಮ. ಹೌಸ್​ಜಾಯ್, ಗ್ರಾಹಕರ ಬೇಡಿಕೆಗನುಗುಣವಾಗಿ ಸೌಂದರ್ಯ, ಮನೆ ಸ್ವಚ್ಛಗೊಳಿಸುವುದು, ಪ್ಲಂಬಿಂಗ್, ಎಲೆಕ್ಟ್ರಿಕಲ್, ಮೊಬೈಲ್ ಫೋನ್ ರಿಪೇರಿ, ಲ್ಯಾಪ್​ಟಾಪ್/ಡೆಸ್ಕ್​ಟಾಪ್ ರಿಪೇರಿ, ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿ, ಫಿಟ್ನೆಸ್, ಕಾರ್ಪೆಂಟರಿ, ಲಾಂಡ್ರಿ, ಪೆಸ್ಟ್ ಕಂಟ್ರೋಲ್, ಪೇಂಟಿಂಗ್​ನಂತಹ ಹತ್ತು ಹಲವು ಪರಿಹಾರಗಳನ್ನು ನಿಮ್ಮ ಮನೆ ಬಾಗಿಲಿನಲ್ಲೇ ಕಲ್ಪಿಸುತ್ತದೆ. ನೀವು ನಿಮ್ಮ ಅಗತ್ಯವನ್ನು ನಮೂದಿಸಿ, ಸೇವೆ ಬೇಕಾದ ಸಮಯ ತಿಳಿಸಿದರೆ ಮನೆ ಬಾಗಿಲಿಗೇ ಸೇವೆ ಒದಗಿಸುವವರನ್ನು ಕಳುಹಿಸಿ ಅದನ್ನು ಪೂರ್ಣಗೊಳಿಸಲಾಗುತ್ತದೆ. ವೆಬ್​ಸೈಟ್, ಆಪ್ ಹಾಗೂ ಕರೆ ಮಾಡುವ ಮೂಲಕವೂ ನಾವು ಇಲ್ಲಿ ಸೇವೆ ಪಡೆಯಬಹುದು.

ಈವರೆಗೆ ಅಮೆಝಾನ್ ಸೇರಿದಂತೆ ಅನೇಕ ಹೂಡಿಕೆ ಸಂಸ್ಥೆಗಳಿಂದ 2 ಸುತ್ತುಗಳಲ್ಲಿ ಸುಮಾರು 30 ಮಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಪಡೆದಿರುವ ಹೌಸ್​ಜಾಯ್, ಆಪ್ ಅಭಿವೃದ್ಧಿ, ಮೊಬೈಲ್ ಜಾಲತಾಣ ಅಭಿವೃದ್ಧಿ, ಹಾಗೂ ಇನ್ನಿತರೆ ಉದ್ಯಮ ಸುಧಾರಣಾ ಕಾರ್ಯಗಳಿಗೆ ಅದನ್ನು ಬಳಸಿದೆ. ಜತೆಗೆ ಉದ್ಯಮ ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ, ಲಾಂಡ್ರಿ ಸ್ಟಾರ್ಟ್​ಅಪ್ ಮೈವಾಷ್ ಹಾಗೂ ವೈಯಕ್ತಿಕ ಫಿಟ್ನೆಸ್ ಸ್ಟಾರ್ಟ್​ಅಪ್ ಒರೊಬಿಂದೋ ಫಿಟ್ನೆಸ್ ಎಂಬ 2 ಉದ್ಯಮಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಇದರಿಂದಾಗಿ ಹೆಚ್ಚಿನ ಬೇಡಿಕೆ ಇರುವ ಲಾಂಡ್ರಿ ಕ್ಷೇತ್ರದಲ್ಲಿ ಉತ್ತಮ ಸೇವೆ ಒದಗಿಸುವಲ್ಲಿ ಹೌಸ್​ಜಾಯ್ ಯಶಸ್ವಿಯಾಗಿದೆ. ಇತ್ತೀಚೆಗೆ ಮೊಬೈಲ್ ಅಪ್ಲಿಕೇಷನ್ ಉನ್ನತೀಕರಿಸಿದ್ದು, ಅದು 2ಜಿ ನೆಟ್​ವರ್ಕ್​ನಲ್ಲೂ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 2ಜಿ ನೆಟ್​ವರ್ಕ್ ಬಳಸುವ ಗ್ರಾಹಕರು ಹಾಗೂ ಸೇವೆ ಒದಗಿಸುವವರು ಹೆಚ್ಚಿರುವುದರಿಂದ, ಅವರ ಅನುಕೂಲಕ್ಕಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.

ಪ್ರಸ್ತುತ ಬೆಂಗಳೂರು, ದೆಹಲಿ, ಮುಂಬಯಿ, ಹೈದರಾಬಾದ್, ಪುಣೆ, ಗುರ್​ಗಾಂವ್, ಜೈಪುರ ಸೇರಿದಂತೆ 12ಕ್ಕೂ ಹೆಚ್ಚು ನಗರಗಳಲ್ಲಿ ತನ್ನ ಸೇವೆ ಒದಗಿಸುತ್ತಿದೆ. ತನ್ನ ವೇದಿಕೆಯಲ್ಲಿ 4000ಕ್ಕೂ ಅಧಿಕ ಸೇವೆ ಒದಗಿಸುವವರನ್ನು ಹೊಂದಿದ್ದು, ಶೀಘ್ರ ಅದನ್ನು 50,000ಕ್ಕೇರಿಸುವ ಹಾಗೂ ನಿತ್ಯ 1,00,000 ಆರ್ಡರ್​ಗಳ ಪೂರೈಕೆ ಗುರಿ ಹೊಂದಿದೆ. ಈವರೆಗೆ 10,00,000ಕ್ಕೂ ಅಧಿಕ ಗ್ರಾಹಕರಿಗೆ ತನ್ನ ಸೇವೆ ಒದಗಿಸಿದೆ.

ಲೇಖಕರು: ಸ್ಟಾರ್ಟ್ ಅಪ್​ಗಳ ವಿಷಯದಲ್ಲಿ ಸಂವಹನ ಸಲಹೆಗಾರರು

Leave a Reply

Your email address will not be published. Required fields are marked *