ಕಲಬುರಗಿ : ಜನರಿಗೆ ಅಗತ್ಯ ವಸ್ತುಗಳ ಕೊರತೆ ಆಗದಂತೆ ದಿನಸಿ, ಔಷಧ ಇತರ ವಸ್ತುಗಳ ಪೂರೈಕೆಗೆ ಏ.8ರಂದು ಆರಂಭಿಸಿರುವ ಮುಂಬಯಿ-ಕಲಬುರಗಿ- ವಾಡಿ ಹಾಗೂ ಮುಂಬಯಿ-ಕಲಬುರಗಿ- ಚೆನ್ನೈ ಮಧ್ಯೆ ಕರೊನಾ ಕೋವಿಡ್-19 ವಿಶೇಷ ಗೂಡ್ಸ್ ರೈಲುಗಳ ಸಂಚಾರವನ್ನು 25ರವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಮುಂಚೆ 14 (ಮಂಗಳವಾರ)ರವರೆಗೆ ಮಾತ್ರ ಓಡಿಸಲು ನಿರ್ಧರಿಸಲಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಪ್ರಧಾನಿಯವರು ಲಾಕ್ಡೌನ್ ಮುಂದುವರಿಸಿದ್ದರಿಂದ ಈ ರೈಲುಗಳು 25ರವರೆಗೆ ಸಂಚರಿಸಲಿವೆ.
ರೈಲು ಪ್ರತಿದಿನ ಮಧ್ಯಾಹ್ನ 3.30ಕ್ಕೆ ಮುಂಬೈನಿಂದ ಹೊರಟು ರಾತ್ರಿ 12ಕ್ಕೆ ವಾಡಿ ನಿಲ್ದಾಣ ತಲುಪಲಿದೆ. ಅದೇ ರೀತಿ ಮರುದಿನ ಬೆಳಗ್ಗಿನ ಜಾವ 2.30ಕ್ಕೆ ಹೊರಟು ಮಧ್ಯಾಹ್ನ ಮುಂಬೈ ತಲುಪಲಿದೆ. ಇನ್ನೊಂದು ರೈಲು ಸಂಜೆ 7.35ಕ್ಕೆ ಮುಂಬೈನಿಂದ ಹೊರಟು ಮರುದಿನ ಸಂಜೆ 6.35ಕ್ಕೆ ಚೆನ್ನೈ ತಲುಪಲಿದೆ. ಅಂದೇ ಬೆಳಗ್ಗೆ 10ಕ್ಕೆ ಚೆನ್ನೈನಿಂದ ಮರಳಿ ಹೊರಟು ರಾತ್ರಿ 8.45ಕ್ಕೆ ಮುಂಬೈ ಸೇರಲಿದೆ.
ಎಲ್ಲ ನಿಲ್ದಾಣಗಳಲ್ಲೂ ಈ ರೈಲು ನಿಲುಗಡೆಯಾಗಲಿದೆ. ಈ ಹಿಂದೆಯೇ ದಿನಸಿ, ವಾಹನ, ಗೃಹೋಪಯೋಗಿ ವಸ್ತುಗಳನ್ನು ಸಾಗಿಸಲು ಸಾರ್ವಜನಿಕರು ಬುಕ್ ಮಾಡಿದ್ದರಿಂದ ನಿಗದಿತ ಅವಧಿಯಲ್ಲಿ ಮಾತ್ರ ಓಡಿಸಲಾಗುತ್ತಿದೆ.
ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಈ ಎರಡು ವಿಶೇಷ ಗೂಡ್ಸ್ ರೈಲುಗಳು ಅನುಕೂಲವಾಗಿವೆ. ತಮ್ಮ ವಸ್ತುಗಳನ್ನು ದೇಶದ ಯಾವುದೇ ಭಾಗಕ್ಕೆ ಕಳುಹಿಸಿಕೊಡಲು ಈ ರೈಲುಗಳ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ.
| ಶರಣು ಪಪ್ಪಾ ಎಚ್ಕೆಸಿಸಿಐ ಉಪಾಧ್ಯಕ್ಷ