ಗುಹಾಂತರ ದೇವಾಲಯ ಸರ್ವೆ

ಚಿಂತಾಮಣಿ: ಕೈಲಾಸಗಿರಿ ಬೆಟ್ಟದಲ್ಲಿ 100 ಹೆಕ್ಟೇರ್ ಸರ್ಕಾರಿ ಭೂಮಿಯಲ್ಲಿರುವ ಕಲ್ಲು ಬಂಡೆಯನ್ನು ಅನಧಿಕೃತವಾಗಿ ಕೊರೆದು ಗುಹಾಂತರ ದೇವಾಲಯ ನಿರ್ವಿುಸಿರುವ ಪ್ರಕರಣ ಹೈಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದ್ದು, ಸ್ಥಳಕ್ಕೆ ಎಸಿ ಅಶೋಕ್ ತೇಲಿ ನೇತೃತ್ವದ ತಂಡ ಶುಕ್ರವಾರ ಭೇಟಿ ನೀಡಿ ಸರ್ವೆ ನಡೆಸಿತು.

ಅಂಬಾಜಿ ದುರ್ಗಾ ಹೋಬಳಿ ಕೋನಪ್ಪಲ್ಲಿ ಗ್ರಾಪಂನ ಕಾವುಲುಗಾನಹಳ್ಳಿ ಸರ್ವೆ ನಂ.12ರ 100 ಹೆಕ್ಟೇರ್ ಸರ್ಕಾರಿ ಖರಾಬ್ ಜಮೀನಿನಲ್ಲಿ ಮಾಜಿ ಗೃಹ ಸಚಿವ ಚೌಡರೆಡ್ಡಿ ಅನಧಿಕೃತವಾಗಿ ಸರ್ಕಾರಿ ಕಲ್ಲು ಬಂಡೆಯಲ್ಲಿ ಬೃಹದಾಕಾರವಾದ ರಂಧ್ರ ಕೊರೆದು ಮಹಾ ಕೈಲಾಸಗಿರಿ ಕ್ಷೇತ್ರ ಗುಹಾಂತರ ದೇವಾಲಯ ನಿರ್ವಿುಸಿರುವ ಕುರಿತು ನಗರಸಭೆ ಸದಸ್ಯ ವೆಂಕಟರವಣಪ್ಪ 2016ರ ಆ.1ರಂದು ಹೈಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದರು. ಜಿಲ್ಲಾಧಿಕಾರಿ ಆದೇಶದಂತೆ ದೇವಾಲಯ ಸ್ಥಳ ಪರಿಶೀಲಿಸಿ ಸರ್ವೆ ನಡೆಸಿ ಮಾಹಿತಿ ಸಲ್ಲಿಸುವುದಾಗಿ ಎಸಿ ತಿಳಿಸಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಸಂದೀಪ್, ಅರಣ್ಯ ಇಲಾಖೆ ಅಧಿಕಾರಿಗಳಾದ ಜಯಚಂದ್ರ, ಮಂಜುನಾಥ್, ಕಂದಾಯ ಇಲಾಖೆ ಆರ್​ಐ ನರಸಿಂಹಯ್ಯ , ಸರ್ವೆ ಅಧಿಕಾರಿಗಳಾದ ತಿಮ್ಮರಾಜು, ಶ್ರೀಧರ್ ಮತ್ತಿತರರಿದ್ದರು.