ಗುವಿವಿಗೆ ನ್ಯಾಕ್ ಮಾನ್ಯತೆ ಶೀಘ್ರ

ಕಲಬುರಗಿ: ಕಷ್ಟಪಟ್ಟು ಮಾಡಿದ ಕೆಲಸ ಕಾರ್ಯಗಳ ದಾಖಲೀಕರಣ ಮಾಡದ ಏಕೈಕ ಕಾರಣಕ್ಕೆ ನ್ಯಾಕ್ ಮಾನ್ಯತೆ ಪಡೆಯುವಲ್ಲಿ ವಿಫಲವಾಗಿರುವ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಶೀಘ್ರವೇ ಎ ಮಾನ್ಯತೆ ಲಭಿಸುವಲ್ಲಿ ಸಂಶಯವಿಲ್ಲ ಎಂದು ವಿವಿ ಕುಲಪತಿ ಪ್ರೊ.ಎಸ್.ಆರ್. ನಿರಂಜನ್ ಆಶಯ ವ್ಯಕ್ತಪಡಿಸಿದರು.
ಗುಲ್ಬರ್ಗ ವಿವಿ ಕುಲಪತಿಯಾಗಿ ಸೇವಾವಧಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪ್ರೊ.ಎಸ್.ಆರ್.ನಿರಂಜನ್-ಭಾರತಿ ನಿರಂಜನ್ ದಂಪತಿಗೆ ವಿವಿ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿ ಗಳು ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ನಾಲ್ಕು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿದಾಗ ಆತಂಕವಿತ್ತು. ಇಲ್ಲಿ ನನಗೆ ಯಾರ ಪರಿಚಯವೂ ಇರಲಿಲ್ಲ. ವಿವಿ ಕುರಿತು ಯಾವ ಮಾಹಿತಿಯೂ ಇರಲಿಲ್ಲ. ದಾಖಲೆಗಳನ್ನು ಸರಿಯಾಗಿಟ್ಟಿರಲಿಲ್ಲ. ಇಂತಹ ಸ್ಥಿತಿಯಲ್ಲೇ ವಿವಿಯನ್ನು ನ್ಯಾಕ್ ಮಾನ್ಯತೆಗೆ ಒಳಪಡಿಸುವ ಸವಾಲು ಎದುರಾಯಿತು. ನಿಧಾನವಾಗಿ ಎಲ್ಲವನ್ನೂ, ಎಲ್ಲರನ್ನೂ ಅರ್ಥ ಮಾಡಿಕೊಂಡ ಬಳಿಕ ಸರ್ವರ ಸಹಕಾರ ಪಡೆದು ವಿವಿ ವ್ಯವಸ್ಥೆ ಸುಧಾರಿಸಲು ಸಾಧ್ಯವಾಯಿತು ಎಂದರು.
ಕೇವಲ ಅಂಕಗಳಿಂದ ಮಾನ್ಯತೆ ಪಡೆಯಲು ಸಾಧ್ಯವಾಗಲಿಲ್ಲ. ಐ ಕೇರ್ ಸಂಸ್ಥೆ ಸಮೀಕ್ಷೆಯಲ್ಲಿ ರಾಜ್ಯಕ್ಕೆ ನಂ.1 ವಿವಿ ಎಂದು ಘೋಷಣೆ ಮಾಡಿದಾಗ ಕೊಂಚ ಖುಷಿಯಾಯಿತು. ಈಗ ನಿರಾತಂಕದಿಂದ ಸೇವಾವಧಿ ಮುಗಿಸಿ ಸಂತೃಪ್ತ ಭಾವದಿಂದ ಹೊರಡುತ್ತಿದ್ದೇನೆ. ಇಲ್ಲಿನ ಜನರು ನನಗೆ ನೀಡಿದ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಭಾವುಕರಾಗಿ ಹೇಳಿದರು.
ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತಕುಮಾರ ಮಾತನಾಡಿ, ಕೃಷಿ ವಿಜ್ಞಾನಿ ಆಗಿರುವ ಪ್ರೊ.ನಿರಂಜನರ ಸಾಧನೆ ಇಡೀ ದೇಶಕ್ಕೆ ಗೊತ್ತಾಗಿದೆ. ಅವರ ದೂರದೃಷ್ಟಿ, ಅಧ್ಯಾಪಕರನ್ನು ಪ್ರೋತ್ಸಾಹಿಸುವ ಗುಣ, ವಿದ್ಯಾಥರ್ಿ, ಸಂಶೋಧನಾಥರ್ಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ಅವರು ಗುವಿವಿ ಕುಲಪತಿಗಳಾಗಿ ಸಾರ್ಥಕ ಸೇವೆ ಮಾಡಿದ್ದಾರೆ. ವಿದ್ಯಾರ್ಥಿ ಆದಿಯಾಗಿ ಎಲ್ಲ ಪ್ರಾಧ್ಯಾಪಕರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದು ಗುಣಗಾನ ಮಾಡಿದರು.
ಪ್ರೊ.ಮೈಖಲ್, ಪ್ರೊ.ಜೆ. ವಿಜಯಕುಮಾರ, ಪ್ರೊ.ಚಂದ್ರಕಾಂತ ಯಾತನೂರ, ವೆಂಕಟೇಶ ಮುದಗಲ್, ವಿಜಯ ಭಾಸ್ಕರ್, ಗಣಪತಿ ಸಿಂಧೆ, ಪ್ರಕಾಶ ಹನೂರಕರ್, ಜಯಪ್ರಕಾಶ ಇತರರು ಪ್ರೊ.ನಿರಂಜನ್ ಕುರಿತು ಅನಿಸಿಕೆ ಹಂಚಿಕೊಂಡರು.
ಕುಲಸಚಿವ ಪ್ರೊ.ಸಿ. ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರಿ ಕುಲಪತಿ ಪ್ರೊ.ಎಸ್.ಪಿ. ಮೇಲಕೇರಿ, ಕುಲಸಚಿವ ಮೌಲ್ಯಮಾಪನ ಪ್ರೊ.ಡಿ.ಎಂ. ಮದರಿ, ವಿತ್ತಾಧಿಕಾರಿ ಪ್ರೊ.ರಾಜನಾಳಕರ ಲಕ್ಷ್ಮಣ, ಸಿಯುಕೆ ಸಮಕುಲಪತಿ ಪ್ರೊ.ಜಿ.ಆರ್. ನಾಯಕ್, ಶ್ರೀಕುಮಾರ, ಡಾ.ಪಿ.ಎಸ್. ಶಂಕರ, ವೀರಭದ್ರ ಸಿಂಪಿ ಇತರರಿದ್ದರು. ಡಿ.ಎಂ. ರುದ್ರವಾಡಿ, ಪ್ರೊ.ಎಚ್.ಟಿ. ಪೋತೆ ನಿರೂಪಣೆ ಮಾಡಿದರು.


ಕಂಬನಿ ಮಿಡಿದ ಕುಲಪತಿ
1998ರಲ್ಲಿ ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕಿತು. ಅದಕ್ಕೆ ಅಗತ್ಯವಾದ ಎಲ್ಲ ದಾಖಲೆಗಳು ಸಿದ್ಧವಾಗಿದ್ದವು. ಆದರೆ ನಮ್ಮ ಕುಲಪತಿಗಳು ನನಗೆ ರಜೆ ನೀಡಲು ನಿರಾಕರಿಸಿದರು. ವಿದೇಶ ಪ್ರಯಾಣ ಅವಕಾಶದಿಂದ ವಂಚಿತರನ್ನಾಗಿ ಮಾಡಿದರು. ದುಃಖ ತಡೆಯದೆ ವಿಭಾಗಕ್ಕೆ ಹೋಗಿ ಬಿಕ್ಕಿಬಿಕ್ಕಿ ಅತ್ತೆ ಎಂದು ಪ್ರೊ.ಎಸ್.ಆರ್. ನಿರಂಜನ್ ಹೇಳುತ್ತಿದ್ದಂತೆ ಅವರ ಕಣ್ಣಿಂದ ಕಂಬನಿ ನೆಲಕ್ಕುರುಳಿದವು. ಈ ದೃಶ್ಯ ನೋಡುತ್ತಿದ್ದ ಸಭಿಕರ ಕಣ್ಣಾಲಿಗಳೂ ಒದ್ದೆಯಾದವು. ನಾನು ಅವಕಾಶ ತಪ್ಪಿಸಿಕೊಂಡಿರಬಹುದು. ಇನ್ಮುಂದೆ ನನ್ನಿಂದಾಗಿ ಯಾವ ವಿದ್ಯಾರ್ಥಿಯೂ ಯಾವುದೇ ಅವಕಾಶದಿಂದ ವಂಚಿತನಾಗಕೂಡದು ಎಂದು ಅಂದೇ ಸಂಕಲ್ಪ ಮಾಡಿದೆ. ಅದರಂತೆ ನಡೆದುಕೊಂಡಿದ್ದೇನೆ ಎಂದರು.


ಬಡತನವನ್ನುಂಡು ಬೆಳೆದ, ರೈತರ ಸಂಕಟವನ್ನು ಅರಿತು, ಬೀಜ ಶೋಧನೆಯಿಂದ ಕೃಷಿಕರ ಬಾಳು ಹಸನಾಗುವಂತೆ ಶ್ರಮಿಸಿದ ಕುಲಪತಿ ಪ್ರೊ.ನಿರಂಜನ್ ಮಾನವೀಯ ಮೌಲ್ಯದ ಬೀಜರೂಪದಂತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಗುವಿವಿ ಉನ್ನತಿಗೆ ಶ್ರಮಿಸಿದ ಅವರ ಕೆಲಸ ಕಾರ್ಯಗಳನ್ನು ಮುಂದುವರಿಸುವೆ. ಅವರೊಂದಿಗೆ ಜಗಳ ಮಾಡಿದವರನ್ನೂ ಅವರು ನಡೆಸಿಕೊಳ್ಳುವ ರೀತಿ ಅನನ್ಯವಾದುದು.
| ಪ್ರೊ.ಎಸ್.ಪಿ. ಮೇಲಕೇರಿ, ಪ್ರಭಾರಿ ಕುಲಪತಿ ಗುವಿವಿ

Leave a Reply

Your email address will not be published. Required fields are marked *