ಗುವಾಹಟಿ: ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಏಕದಿನ ಟಿ20 ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಟಾಸ್ ಜಯಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರವಾಸಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಆದರೆ, ಪಂದ್ಯ ಆರಂಭಗೊಳ್ಳುವಷ್ಟರಲ್ಲಿ ಮಳೆ ಶುರುವಾಯಿತು. ಬಳಿಕ ಮಳೆ ನಿಂತರೂ, ಹೊದಿಕೆ ಮೇಲಿನ ನೀರು ಸೋರಿಕೆಯಾಗಿದ್ದರಿಂದ ಪಿಚ್ ಅಲ್ಲಲ್ಲಿ ಒದ್ದೆಯಾಗಿತ್ತು. ಪಿಚ್ ಸಕಾಲದಲ್ಲಿ ಒಣಗದ ಕಾರಣ ರಾತ್ರಿ 9.55ರ ವೇಳೆಗೆ ಪಂದ್ಯ ರದ್ದುಗೊಳಿಸಲು ಅಂಪೈರ್ಗಳು ನಿರ್ಧರಿಸಿದರು.
ಪಿಚ್ ಒಣಗಿಸಲು ವ್ಯಾಕುಂ ಕ್ಲೀನರ್, ಹೇರ್ ಡ್ರೆಸರ್, ಐರನ್ ಬಾಕ್ಸ್ ಬಳಸಿದರೂ ಪ್ರಯೋಜವಾಗಲಿಲ್ಲ. ಮೈದಾನದ ಸಿಬ್ಬಂದಿ ಅಂತಿಮ ಕ್ಷಣದವರೆಗೂ ಪಿಚ್ ಒಣಗಿಸಲು ಹರಸಾಹಸ ಪಟ್ಟರು. ಅಂಪೈರ್ಗಳಾದ ಅನಿಲ್ ಚೌಧರಿ ಹಾಗೂ ನಿತಿನ್ ಮೆನನ್ 3 ಬಾರಿ ಪಿಚ್ ಪರಿಶೀಲಿಸಿದ ಬಳಿಕ ಪಂದ್ಯವನ್ನು ರದ್ದುಗೊಳಿಸಿದರು. ಗೆಲುವಿನೊಂದಿಗೆ ನೂತನ ವರ್ಷವನ್ನು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದ ವಿರಾಟ್ ಕೊಹ್ಲಿ ಪಡೆ ನಿರಾಸೆ ಕಂಡಿತು. ಅಂಪೈರ್ಗಳ ಅಂತಿಮ ತೀರ್ಮಾನ ಹೊರಬೀಳುವವರೆಗೂ ಬರ್ಸಾಪರ ಸ್ಟೇಡಿಯಂ ಕಿಕ್ಕಿರಿದು ತುಂಬಿತ್ತು.
ಜಸ್ಪ್ರೀತ್ ಬುಮ್ರಾ ವಾಪಸ್
ಬೆನ್ನು ನೋವಿನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕಳೆದ ನಾಲ್ಕು ತಿಂಗಳಿನಿಂದ ಕ್ರಿಕೆಟ್ನಿಂದ ದೂರವಿದ್ದ ಜಸ್ಪ್ರೀತ್ ಬುಮ್ರಾ ಹನ್ನೊಂದರ ಬಳಗಕ್ಕೆ ವಾಪಸಾದರು. ಫಿಟ್ನೆಸ್ ಸಾಬೀತುಪಡಿಸಲು ಅವರು ರಣಜಿ ಟ್ರೋಫಿ ಪಂದ್ಯದಲ್ಲಿ ಗುಜರಾತ್ ಪರ ಆಡಬೇಕಿತ್ತಾದರೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೀಡಿದ ವಿನಾಯಿತಿಯಿಂದಾಗಿ ಆಡಿರಲಿಲ್ಲ. ಕಳೆದ ಮೂರು ತಿಂಗಳಲ್ಲಿ ತವರು ನೆಲದಲ್ಲಿ ನಡೆದ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಿಗೆ ಬುಮ್ರಾ ಅಲಭ್ಯರಾಗಿದ್ದರು. ಕರ್ನಾಟಕದ ಮನೀಷ್ ಪಾಂಡೆ, ಕೇರಳದ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು.