More

  ಗುಲಾಬಿ ದರ ದಿಢೀರ್ ಕುಸಿತ: ಹಬ್ಬದ ದಿನವೇ ಅನ್ನದಾತರಿಗೆ ಶಾಕ್; ಕೆಜಿಗೆ 170ರೂ. ಇದ್ದದ್ದು 60 ರೂ.ಗೆ ಇಳಿಕೆ

  ಎನ್.ವೆಂಕಟೇಶ್ ಚಿಕ್ಕಬಳ್ಳಾಪುರ: ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಹಬ್ಬದ ದಿನವೇ ಗುಲಾಬಿ ಹೂವಿನ ಬೆಲೆ ದಿಢೀರ್ ಕುಸಿದಿದ್ದು ಶಾಕ್ ಹೊಡೆದಂತಾಗಿದೆ.

  ಹಬ್ಬದ ಮುನ್ನಾದಿನವಾದ ಮಂಗಳವಾರ ಕೆಜಿಗೆ 160 ರಿಂದ 180 ರೂ. ಇತ್ತು. ಆದರೆ, ಮಾರನೇ ದಿನವೇ 60 ರಿಂದ 70 ರೂ.ಗೆ ಕುಸಿದಿದೆ. ಹಬ್ಬದ ದಿನದಂದು ಖುಷಿಯಲ್ಲಿ ಮಾರುಕಟ್ಟೆಗೆ ಬಂದ ಬೆಳೆಗಾರರು ಆಘಾತಕ್ಕೊಳಗಾಗಿದ್ದಾರೆ.

  ಜಿಲ್ಲೆಯು ರೇಷ್ಮೆ, ತರಕಾರಿ, ಹಾಲು ಉತ್ಪಾದನೆ ಜತೆಗೆ ಹೂವು ಬೆಳೆಯುವುದರಲ್ಲೂ ಮುಂಚೂಣಿಯಲ್ಲಿದೆ. ಕ್ರಿಸ್‌ಮಸ್, ಹೊಸ ವರ್ಷಾಚರಣೆ, ಪ್ರೇಮಿಗಳ ದಿನ ಸಂದರ್ಭದಲ್ಲಿ ಪ್ರೇಮ ಸಂಕೇತದ ಕೆಂಪು ಗುಲಾಬಿ ಮಲೇಷಿಯಾ, ಸಿಂಗಾಪುರ, ನೇಪಾಳ, ಚೀನಾ ಸೇರಿ ವಿವಿಧ ದೇಶಗಳಿಗೆ ರ‌್ತಾಗುತ್ತದೆ, ಉಳಿದಂತೆ ಹಬ್ಬ -ಹರಿದಿನಗಳಲ್ಲಿ ಮತ್ತು ಸಾಮಾನ್ಯ ದಿನಗಳಲ್ಲಿ ಮಹಾರಾಷ್ಟ್ರ, ಆಂಧ್ರ, ತೆಲಂಗಾಣಕ್ಕೆ ಲೋಡುಗಟ್ಟಲೆ ಸಾಗಣೆಯಾಗುತ್ತದೆ. ಇದಕ್ಕಾಗಿಯೇ ಇಲ್ಲಿನ ರೈತರು ಹೈನುಗಾರಿಕೆ, ಕೃಷಿ ಚಟುವಟಿಕೆ ಜತೆಗೆ ಲಕ್ಷಾಂತರ ರೂ. ಬಂಡವಾಳ ಹೂಡಿ ಪಾಲಿಹೌಸ್ ನಿರ್ಮಾಣ ಸೇರಿ ನಾನಾ ತಂತ್ರಜ್ಞಾನದಲ್ಲಿ ಹೂವು ಬೆಳೆಯುತ್ತಾರೆ. ಇದರ ನಡುವೆ ಆಗಾಗ ಬೇಡಿಕೆ ಮತ್ತು ಬೆಲೆ ಕುಸಿತದಿಂದ ಆರ್ಥಿಕ ನಷ್ಟಕ್ಕೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದಾರೆ.

  ಕುಸಿತಕ್ಕೆ ಕಾರಣ?: ಹಬ್ಬದ ಸಂಭ್ರಮದ ವಾರಕ್ಕೆ ಮೊದಲೇ ಹೂವು ವಿವಿಧೆಡೆ ಸಾಗಣೆಯಾಗುತ್ತಿತ್ತು. ಆದರೆ, ಇದೀಗ ಬೇಡಿಕೆ ಇಲ್ಲದಿರುವುದರಿಂದ ವ್ಯಾಪಾರಸ್ಥರು ಖರೀದಿ ನಿಲ್ಲಿಸಿದ್ದಾರೆ. ಸ್ಥಳೀಯವಾಗಿ ಮಾತ್ರ ಮಾರಾಟವಾಗುತ್ತಿದ್ದು, ದಿಢೀರ್ ಬೆಲೆ ಕುಸಿದಿದೆ. ಇನ್ನೂ ಎರಡ್ಮೂರು ದಿನ ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿದ್ದ ಅನ್ನದಾತರಿಗೆ ಎಲ್ಲವೂ ಹುಸಿಯಾಗಿದೆ.

  ನಿರ್ವಹಣೆ ವೆಚ್ಚವೂ ಬರಲಿಲ್ಲ!: ಒಳ್ಳೆಯ ಬೆಲೆ ಸಿಗಬೇಕೆಂಬ ಉದ್ದೇಶದಿಂದ ಹಬ್ಬದ ಅವಧಿ ನೋಡಿಕೊಂಡು ತೋಟದಲ್ಲಿ ಹೂವುಗಳನ್ನು ಕೀಳಲಾಗುತ್ತದೆ. ಆದರೆ, ಕಳೆದ ವರ್ಷದ ಯುಗಾದಿ, ಗಣೇಶ ಚತುರ್ಥಿ, ವರಮಹಾಲಕ್ಷ್ಮೀ, ದಸರಾ ಸಂದರ್ಭದಲ್ಲಿ ಎರಡ್ಮೂರು ದಿನಗಳಲ್ಲಿ ಮಾತ್ರ ಒಳ್ಳೆಯ ಲಾಭ ಸಿಕ್ಕಿತು. ಆ ನಂತರ ತಿಂಗಳಾನುಗಟ್ಟಲೇ ತುಂಬಾ ಕಡಿಮೆ ಬೆಲೆಗೆ ಮಾರಬೇಕಾಯಿತು. ನಿರ್ವಹಣೆ ವೆಚ್ಚವನ್ನೂ ಸರಿದೂಗಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಹೂವು ಬೆಳೆಗಾರರು.

  ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಇನ್ನೂ ಒಂದು ವಾರ ಹೂವಿಗೆ ಒಳ್ಳೆಯ ಬೆಲೆ ನಿರೀಕ್ಷಿಸಲಾಗಿತ್ತು. ಆದರೆ, ಹಬ್ಬದ ದಿನವೇ ಬೇಡಿಕೆ ಕುಸಿದಿರುವುದು ನಿರಾಶೆ ಮೂಡಿಸಿದೆ.
  ಶ್ರೀನಿವಾಸ್, ಹೂವು ಬೆಳೆಗಾರರು

  ಖರೀದಿಸಿದ ಹೂವನ್ನು ಪ್ಯಾಕ್ ಮಾಡಿ ಬೇರೆ ಬೇರೆ ಕಡೆಗೆ ಸಾಗಿಸಲಾಗುತ್ತಿತ್ತು. ಆದರೆ, ಈಗ ಸಾಗಣೆ ನಿಲ್ಲಿಸಲಾಗಿದೆ. ಇದರಿಂದ ಹೂವಿನ ದರ ಕುಸಿದಿದೆ.
  ರಮೇಶ್, ಎಪಿಎಂಸಿ ಮಾರುಕಟ್ಟೆ ವರ್ತಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts