ಗುರು ಮತ್ತು ಗುರುತತ್ತ್ವ

ದೇವತೆಗಳು ರಾಕ್ಷಸರು ಇಬ್ಬರೂ ಸೇರಿ ಅಮೃತಕ್ಕಾಗಿ ಸಮುದ್ರ ಮಥನ ಮಾಡಿದರು. ಆಗ ಜಗತ್ತಿನಲ್ಲಿಯೇ ಅಪೂರ್ವವಾದ ಅನೇಕ ವಸ್ತುಗಳ ಉದಯವಾಯಿತು. ಅದರಲ್ಲಿ ಒಂದು ವಿಶೇಷವಾದ ಹಸುವಿನ ಜನ್ಮವೂ ಆಯಿತು, ಅದೇ ಕಾಮಧೇನು. ಇದು ಕೂಡ ಕೇಳಿದ್ದನ್ನು ಕೊಡುವ ಬಹಳ ವಿಶೇಷವಾದ ಹಸು. ಹೀಗೆಯೇ ಹದಿನಾಲ್ಕು ಬಹಳ ಅಪರೂಪದ ರಥಗಳು, ವಸ್ತುಗಳು ಮತ್ತು ಪ್ರಾಣಿಗಳ ಉದಯವಾಯಿತು. ಅವೆಲ್ಲವನ್ನೂ ಇಂದ್ರ ದೇವಲೋಕದಲ್ಲಿರಿಸಿಕೊಂಡ.

ಸಮುದ್ರಮಥನದಲ್ಲಿ ಉತ್ಪತ್ತಿಯಾದ ಈ ವಸ್ತುಗಳೆಲ್ಲ ಸಾಮಾನ್ಯವಾದವುಗಳಲ್ಲ. ಆದ್ದರಿಂದ ಸರ್ವಜ್ಞ ಕಲ್ಪವೃಕ್ಷವು ಸಾಮಾನ್ಯ ಮರವಲ್ಲ ಮತ್ತು ಕಾಮಧೇನುವು ಸಾಮಾನ್ಯ ಹಸುವಲ್ಲ ಎಂದ ತನ್ನ ತ್ರಿಪದಿಯಲ್ಲಿ. ಇದೇ ರೀತಿ ಶಾಸ್ತ್ರದಲ್ಲಿ ಸ್ಪರ್ಶಮಣಿಯ ಕುರಿತು ಉಲ್ಲೇಖವಿದೆ. ಹಿಂದೆ ಒಂದು ವಿಶೇಷ ಕಲ್ಲಿತ್ತಂತೆ. ಅದನ್ನು ಯಾವುದೇ ಲೋಹಕ್ಕೆ ರ್ಸ³ಸಿದರೆ ಆ ಲೋಹ ಬಂಗಾರವಾಗುತ್ತಿತ್ತಂತೆ. ಸ್ಪರ್ಶಮಣಿಯು ಕಲ್ಲಾದರೂ ಸಾಮಾನ್ಯ ಕಲ್ಲಲ್ಲ. ಹಾಗೆಯೇ ಗುರು ನೋಡಲು ಸಾಮಾನ್ಯರ ಹಾಗೆಯೇ ಕಂಡರೂ ಅವನು ಸಾಮಾನ್ಯನಲ್ಲ. ಆದ್ದರಿಂದ ಎಂದೂ ಗುರುವನ್ನು ಸಾಮಾನ್ಯನಂತೆ ಕಾಣಬಾರದು.

ಗುರುವಚನ ಉಪದೇಶ ಗುರುವಚನ ವರಭಕ್ತಿ

ಗುರುವಚನ ಮೋಕ್ಷಪದವದುವೇ ಗುರುವಚನ

ಪರಮಾರ್ಥವಯ್ಯ ಸರ್ವಜ್ಞ.

ಗುರುವಚನವೇ ಉಪದೇಶ. ಸಾಧಕನಿಗೆ ಯಾವ ವೇದದ ಆವಶ್ಯಕತೆಯಿಲ್ಲ, ಯಾವ ಬೇರೆ ಜ್ಞಾನದ ಆವಶ್ಯಕತೆಯಿಲ್ಲ. ಗುರುವಚನದಿಂದಲೇ ಭಕ್ತಿಯ ಉದಯ. ಗುರುವಚನದಿಂದಲೇ ಮೋಕ್ಷ, ಗುರುವಚನವೇ ಪರಮಾರ್ಥ. ಆದ್ದರಿಂದ ಸಾಧಕನು ಗುರುವಚನವನ್ನು ಬಿಟ್ಟು ಬೇರೆ ಏನನ್ನೂ ಮಾಡಬಾರದು ಎಂಬುದೇ ಸರ್ವಜ್ಞನ ಅಭಿಪ್ರಾಯ.

ಕರುಣರಸದ ಕೋಡಿವರಿವ ಕಟಾಕ್ಷದ

ಪರತತ್ತ್ವದವರುಪುವಾಲಾಪದ

ವರಪುಣ್ಯಮಯ ಶರೀರದ ನಿರಾಭಾರಿ

ಸದ್ಗುರುವಿರಲೆನ್ನ ಮಾನಸದಲ್ಲಿ.

Leave a Reply

Your email address will not be published. Required fields are marked *