ನಾಯಕನಹಟ್ಟಿ, ಕಾಯಕ, ಸಂಸ್ಕೃತಿ, ಹರಿಕಾರ, ರಥೋತ್ಸವ, Nayakanahatti, kayak, culture, beginner, chariot festival
ನಾಯಕನಹಟ್ಟಿ: ಶಿಷ್ಟ ಹಾಗೂ ಬುಡಕಟ್ಟು ಸಂಸ್ಕೃತಿ ಮೇಳೈಸಿರುವ ನಾಡಿನ ಪ್ರಸಿದ್ಧ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಗುರುವಾರ ನಾಯಕನಹಟ್ಟಿಯಲ್ಲಿ ಲಕ್ಷಾಂತರ ಭಕ್ತ ಸಾಗರದ ನಡುವೆ ಸಂಭ್ರಮ, ಸಡಗರದಿಂದ ಜರುಗಿತು.
70 ಅಡಿ ಎತ್ತರದ ರಥವನ್ನು ವಿವಿಧ ಬಣ್ಣಗಳ ಪಟಗಳಿಂದ ಅಲಂಕರಿಸಲಾಗಿತ್ತು. ಮಧ್ಯಾಹ್ನ 2.30ರ ಹೊತ್ತಿಗೆ ಅಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥದ ಬಳಿ ಮೆರವಣಿಗೆಯೊಂದಿಗೆ ತರಲಾಯಿತು.
ಜೋಗಿಹಟ್ಟಿಯವರು ಮೀಸಲು ಅರ್ಪಿಸಿದ ನಂತರ ರಥಕ್ಕೆ ವಿವಿಧ ಪೂಜೆ ಕಾರ್ಯ ನೆರವೇರಿಸಲಾಯಿತು. ನಾಯಕನಹಟ್ಟಿ, ತಳಕು ಮನ್ನೆಕೋಟೆ ಭಕ್ತರಿಂದ ಪೂಜೆ ಸಲ್ಲಿಸಿ ಮುಕ್ತಿ ಬಾವುಟ ಹರಾಜು ಹಾಕಲಾಯಿತು. 3.15 ಗಂಟೆಗೆ ರಥೋತ್ಸವ ಜರುಗಿತು.
ಕಾಯಕ ಸಂಸ್ಕೃತಿ ಹರಿಕಾರ ತಿಪ್ಪೇರುದ್ರಸ್ವಾಮಿಗೆ ಭಕ್ತಗಣ ವಿಶೇಷವಾಗಿ ಹರಕೆ ಸಲ್ಲಿಸುತ್ತಿದ್ದುದು ಕಂಡು ಬಂತು. ರಥಕ್ಕೆ ತೂರುವ ಬಾಳೆಹಣ್ಣು ಆಗಸದಲ್ಲಿ ಪಕ್ಷಿಗಳಂತೆ ಹಾರಾಡುತ್ತಿದ್ದವು. ರಥವು ಪಾದಗಟ್ಟೆಗೆ ತೆರಳಿ ನಂತರ ಸಂಜೆ 5.50ಕ್ಕೆ ಸ್ವ ಸ್ಥಾನಕ್ಕೆ ಹಿಂತಿರುಗಿತು.
ಬೆಳಗ್ಗೆ 11 ಗಂಟೆಗೆ ಬ್ರಹ್ಮ ರಥೋತ್ಸವ ಜರುಗಿತು. ನಂತರ ದೊಡ್ಡ ರಥೋತ್ಸವದ ಕಾರ್ಯ ಆರಂಭವಾದವು. ಉತ್ಸವದಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿ ವರ್ಗವೇ ನೆರೆದಿತ್ತು.
ಬಿಸಿಲಲ್ಲೂ ಕುಂದದ ಉತ್ಸಾಹ: ಬಿರು ಬಿಸಿಲಿನಲ್ಲೂ ಭಕ್ತರ ಉತ್ಸಾಹ ಕಡಿಮೆಯಾಗಲಿಲ್ಲ. ಉತ್ಸವದಲ್ಲಿ ತಂಪು ಪಾನೀಯಗಳ ಬೇಡಿಕೆ ಹೆಚ್ಚಾಗಿತ್ತು. ಒಳಮಠ ಹಾಗೂ ಹೊರಮಠದ ಬಳಿ ಭಕ್ತರು ಕೊಬ್ಬರಿ ಸುಟ್ಟು ಹರಕೆ ಸಲ್ಲಿಸಿದರು.
ಉತ್ಸವದ ಉದ್ದಕ್ಕೂ ಪೊಲೀಸರು ಭದ್ರತೆ ಒದಗಿಸಿದ್ದರು. ವಾಹನಗಳಿಗೆ ಪಟ್ಟಣ ಪ್ರವೇಶಿಸದಂತೆ ಬ್ಯಾರಿಕೇಡ್ ನಿರ್ಮಿಸಲಾಗಿತ್ತು. 22 ಕಡೆ ಪೊಲೀಸ್ ಸಹಾಯವಾಣಿ ಕೇಂದ್ರ ತೆರೆಯಲಾಗಿತ್ತು. ಕೊಳವೆಬಾವಿಗಳಿಂದ 35 ಟ್ಯಾಂಕರ್‌ಗಳ ಮೂಲಕ ಭಕ್ತರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಯಿತು.
ಭಕ್ತಾಧಿಗಳು ದ್ವಿಚಕ್ರ ವಾಹನ, ಲಘುವಾಹನ. ಜೋಡಿ ಎತ್ತಿನ ಗಾಡಿಗಳಿಂದ ಸಮರೋಪಾದಿಯಲ್ಲಿ ಆಗಮಿಸಿದ್ದರು. ಬಿಸಿಲು ಹೆಚ್ಚಾಗಿದ್ದರಿಂದ ಪಟ್ಟಣದ ವ್ಯಾಪ್ತಿಯ ತೋಟಗಳು ಸೇರಿ ಅಲ್ಲಲ್ಲಿ ಬೀಡು ಬಿಟ್ಟಿದ್ದರು. ಭಕ್ತರಿಗೆ ಸಂಘ ಸಂಸ್ಥೆಗಳು ಉಚಿತ ತಂಪು ಪಾನೀಯ, ಮಜ್ಜಿಗೆ, ನೀರಿನ ಪ್ಯಾಕೆಟ್‌ಗಳನ್ನು ವಿತರಿಸುತ್ತಿದ್ದರು.
26 ಲಕ್ಷ ರೂ. ಮುಕ್ತಿ ಬಾವುಟ ಹರಾಜು: ರಥೋತ್ಸವಕ್ಕೂ ಮುನ್ನ ನಡೆದ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆಯಲ್ಲಿ ಚಳ್ಳಕೆರೆಯ ಸಿ.ವೀರಭದ್ರಬಾಬು 26 ಲಕ್ಷ ರೂ. ಕೂಗಿ ಬಾವುಟ ಪಡೆದರು. ಕಳೆದ ಬಾರಿ ಮೈಸೂರಿನ ಉದ್ಯಮಿ ಸೋಮಣ್ಣ 51 ಲಕ್ಷ ರೂ.ಗೆ ಪಡೆದಿದ್ದರು.
ಗಮನ ಸೆಳೆದ ವಸ್ತು ಪ್ರದರ್ಶನ: ಕೃಷಿ, ರೇಷ್ಮೆ, ಸೇರಿ ವಿವಿಧ ಇಲಾಖೆಗಳು ಸಮುದಾಯ ಆರೋಗ್ಯ ಕೇಂದ್ರದ ಬಳಿ ವಸ್ತು ಪ್ರದರ್ಶನ ಏರ್ಪಡಿಸಿದ್ದವು. ಸಿರಿಧಾನ್ಯಗಳಿಂದ ಕೂಡಿದ ಧಾನ್ಯ ರಾಶಿ ಗಮನ ಸೆಳೆಯಿತು. ಪಶು ಆಸ್ಪತ್ರೆ ಬಳಿ ಜೋಡಿ ಹೋರಿಗಳ ಪ್ರದರ್ಶನ, ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು. ಫ್ಯಾಷನ್ ಷೋ ರೀತಿ ರಾಸುಗಳಿಗೆ ನಡಿಗೆಗೆ ವ್ಯವಸ್ಥೆ ಕಲ್ಪಿಸಿದ್ದು ವಿಶೇಷವಾಗಿತ್ತು.
ಕರೊನಾಕ್ಕೂ ಕುಗ್ಗದ ಭಕ್ತಿ: ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ಕರೊನಾ ವೈರಸ್ ಆತಂಕ ಹಟ್ಟಿ ಪರಿಷೆಯಲ್ಲಿ ಕಾಣಿಸಲಿಲ್ಲ. ಲಕ್ಷಾಂತರ ಭಕ್ತರು ತಿಪ್ಪೇಶನ ಜಾತ್ರೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಆರೋಗ್ಯ ಇಲಾಖೆ ಕಳೆದ ಮೂರು ದಿನಗಳಿಂದ ಜಾಗೃತಿ ಕಾರ್ಯಕ್ರಮ ನಡೆಸಿತ್ತು.