ಪ್ರತ್ಯೇಕ ಧರ್ಮದ ಜೀವ 6 ತಿಂಗಳಷ್ಟೆ

ಶಿವಮೊಗ್ಗ: ರಾಜ್ಯದಲ್ಲಿ ಲಿಂಗಾಯತ ಮತ್ತು ವೀರಶೈವ ಪ್ರತ್ಯೇಕ ಧರ್ಮದ ಚರ್ಚೆ ಆರೇಳು ತಿಂಗಳು ಮಾತ್ರ ಪ್ರಚಲಿತದಲ್ಲಿರಲಿದೆ. ರಾಜಕೀಯ ಕಾರಣಗಳಿಗೆ ಕೆಲವರು ಸಮಾಜ ಹೊಡೆಯುವ ಹುನ್ನಾರ ನಡೆಸಿದ್ದಾರೆ ಎಂದು ಬಾಳೇಹೊನ್ನೂರು ರಂಭಾಪುರಿ ಜಗದ್ಗುರು ಡಾ. ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ನವುಲೆ ಸಮೀಪದ ಕುವೆಂಪು ನಗರದಲ್ಲಿ ಶುಕ್ರವಾರ ಅಖಿಲ ಭಾರತ ವೀರಶೈವ ಮಹಾಸಭಾ ಶಿವಮೊಗ್ಗ ಜಿಲ್ಲಾ ಘಟಕದ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಇನ್ನೂ ಕಾಲ ಮಿಂಚಿಲ್ಲ. ವೀರಶೈವದ ಎಲ್ಲ ಒಳ ಪಂಗಡಗಳು ಸಮಾನ ಮನಸ್ಕರಾಗಿ ಹೋರಾಡಿದರೆ ರಾಜಕೀಯ ಶಕ್ತಿಗಳಿಗೆ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದರು.

ವೀರಶೈವರನ್ನು ಒಡೆದು ಆಳದಿದ್ದರೆ ಅಧಿಕಾರ ಸಿಗಲ್ಲ ಎನ್ನುವ ಕಾರಣಕ್ಕೆ ಇಡೀ ಸಮಾಜವನ್ನೇ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ವೀರಶೈವರು ಬಹುಸಂಖ್ಯಾತರಾಗಿದ್ದರೂ ಒಳ ಜಾತಿಗಳ ತಿಕ್ಕಾಟದಿಂದ ಸೌಹಾರ್ದತೆ ಇಲ್ಲ. ಇದರಿಂದ ಪ್ರಗತಿ ಕಾಣಲು ಸಾಧ್ಯವಾಗುತ್ತಿಲ್ಲ. ಸಣ್ಣ ಜಾತಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಆಗುತ್ತಿವೆ. ಆದರೆ ವೀರಶೈವ ಸಮಾಜದ ಮೂಲ ಶಕ್ತಿಗಳನ್ನೇ ಒಳ ಪಂಗಡಗಳ ಹೆಸರಲ್ಲಿ ಛಿದ್ರಗೊಳಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೀರಶೈವರಿಗೂ ರಾಜಕೀಯದಲ್ಲಿ ಸಮಾನ ಅವಕಾಶ, ಪುರಸ್ಕಾರ ಸಿಗಬೇಕು. ಆದರೆ ಕೆಲವೇ ಕೆಲವು ಪಂಗಡಗಳು ಮಾತ್ರ ಒಳ ಜಾತಿಗಳ ಮೂಲಕ ಸೌಲಭ್ಯಕ್ಕಾಗಿ ಹೋರಾಟ ನಡೆಸುತ್ತಿರುವುದು ದುರಂತ. ಅಧಿಕಾರ ದಾಹಕ್ಕೆ ಧರ್ಮಗಳನ್ನೇ ಇಬ್ಭಾಗ ಮಾಡಲಾಗುತ್ತಿದೆ ಎಂದು ದೂರಿದರು.

ತೊಗರ್ಸಿಯ ಮಹಾಂತ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬಿಳಕಿ ಮಠದ ರಾಚೋಠೇಶ್ವರ ಸ್ವಾಮೀಜಿ ಆಶೀವರ್ಚನ ನೀಡಿದರು. ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಬಿ.ವೈ.ರಾಘವೇಂದ್ರ, ರಾಜ್ಯಸಭೆ ಮಾಜಿ ಸದಸ್ಯ ಆಯನೂರು ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಕಾರ್ಪೆರೇಟರ್ ವಿಶ್ವನಾಥ್ ಕಾಶಿ ಮತ್ತಿತರರು ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಂಡು ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದು ತೆರಳಿದರು.

ಗುರುವಿರಕ್ತರು ಸಮಾಜದ 2 ಕಣ್ಣುಗಳು: ಮಠಗಳಿಂದಲೇ ಸಮಾಜ ಇನ್ನೂ ಜೀವಂತವಾಗಿದ್ದು, ಮಠಗಳೇ ಜನರಿಗೆ ದಾರಿ ದೀಪಗಳಾಗಿವೆ. ಈ ಹಿಂದೆ ಗುರುವಿರಕ್ತರು ಎಂಬುದೇ ದೊಡ್ಡ ಪಿಡುಗಾಗಿತ್ತು. ಆದರೆ ಇಂದು ಗುರುವಿರಕ್ತರು ಸಮಾಜದ 2 ಕಣ್ಣುಗಳಿದ್ದಂತೆ. 2 ಕಣ್ಣಿದ್ದರೂ ನೋಟ ಒಂದೇ ಆಗಿದೆ ಎಂದು ಸಾನ್ನಿಧ್ಯ ವಹಿಸಿದ್ದ ಆನಂದಪುರಂ ಬೆಕ್ಕಿನಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಹೇಳಿದರು.

ಮಠಗಳಲ್ಲಿ ಮಠಾಧೀಶರನ್ನು ಸಂಘಟಿಸುವುದು ದೊಡ್ಡ ಸಮಸ್ಯೆಯಾಗಿದೆ. ವೀರಶೈವ ಮಹಾಸಭಾ ಕಟ್ಟಿದ ಕೀರ್ತಿ ಹಾನಗಲ್​ನ ಕುಮಾರೇಶ್ವರ ಸ್ವಾಮೀಜಿಗೆ ಸಲ್ಲುತ್ತದೆ. ಸಮಾಜದ ಸ್ಥಾಪನೆಗಾಗಿ ಮಹಾಸಭಾ ರಚನೆ ಮಾಡಲಾಗಿದೆ ಎಂದರು.

Leave a Reply

Your email address will not be published. Required fields are marked *