ಯಾದಗಿರಿ: ಗುರುಮಠಕಲ್ ಪಟ್ಟಣದಲ್ಲಿರುವ ಶಾಸಕ ನಾಗನಗೌಡ ಕಂದಕೂರ ಜನಸಂಪರ್ಕ ಕಚೇರಿ ಆವರಣದಲ್ಲಿ ಬುಧವಾರ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜಾ ಕಾರ್ಯಕ್ರಮ ಅಸಂಖ್ಯ ಭಕ್ತರ ಮಧ್ಯೆ ಸಂಭ್ರಮದಿಂದ ಜರುಗಿತು.
ಕನ್ಯಾಸ್ವಾಮಿ ಶರಣಗೌಡ ಕಂದಕೂರ ನೇತೃತ್ವದಲ್ಲಿ ನಡೆದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕೇರಳದಿಂದ ಆಗಮಿಸಿದ್ದ ಎಂಟು ತಂತ್ರಿಗಳು ಹರಿಹರ ಪುತ್ರನ ಪೂಜೆಯನ್ನು ಸಾಂಗವಾಗಿ ನೆರವೇರಿಸಿದರು. ಪ್ರಧಾನ ವೇದಿಕೆಯಲ್ಲಿ ಅಯ್ಯಪ್ಪ ಸ್ವಾಮಿ ಮೂತರ್ಿ ಮತ್ತು ಆತನಿಗೆ ಪ್ರಿಯವಾದ ಪವಿತ್ರ 18 ಮೆಟ್ಟಿಲು ಸ್ಥಾಪಿಸಿ ಹೂಮಾಲೆಗಳಿಂದ ಅಲಂಕರಿಸಲಾಗಿತ್ತು. ಪುಷ್ಪಾಭಿಷೇಕ ಬಳಿಕ 18 ಮೆಟ್ಟಿಲುಗಳಲ್ಲಿ ಪರಂಪರಾಗತ ರೀತಿಯಲ್ಲಿ ದೀಪಗಳನ್ನು ಪ್ರಜ್ವಲಿಸಿ ತಂತ್ರಿಗಳು ಆರತಿ ಬೆಳಗಿದರು.
ಬೆಳಗ್ಗಿನ ಜಾವ 5.30ಕ್ಕೆ ಪೂಜೆ ಆರಂಭಗೊಂಡಿತು. ತಂತ್ರಿಗಳು ಪೂಜಾ ವಿ ಕೈಂಕರ್ಯ ಕೈಗೊಂಡರು. ಸೇವಾಥರ್ಿ, ಕನ್ಯಾಸ್ವಾಮಿ ಶರಣಗೌಡ ಕಂದಕೂರ ಅವರಿಂದ ಗಣಪತಿ ಪೂಜೆ ಮಾಡಿಸಲಾಯಿತು. 250 ಗುರುಸ್ವಾಮಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು. ವೇದಿಕೆ ಮುಂಭಾಗದಲ್ಲಿ ಕನ್ಯಾಸ್ವಾಮಿಗಳು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.
ನಂತರ ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ತಾವರೆ, ಸೇವಂತಿಗೆ, ಕಣಗಿಲೆ, ತುಳಸಿ, ಮಲ್ಲಿಗೆ, ಬಿಲ್ವಪತ್ರೆಗಳಿಂದ ಪುಷ್ಪಾಭಿಷೇಕ ಮಾಡಲಾಯಿತು. ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ನ ಸಂಗೀತ ಬಳಗ ಸುದೀರ್ಘ ಮೂರು ಗಂಟೆ ದಾಸವಾಣಿ ನಡೆಸಿಕೊಟ್ಟಿತು. ವೇದಿಕೆ ಕೆಳಭಾಗದಲ್ಲಿ ಕನ್ಯಾಸ್ವಾಮಿಗಳ ಪೂಜೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಗುರುಮಠಕಲ್ ಸೇರಿ ಸುತ್ತಮುತ್ತಲಿನ ತಾಲೂಕು ಹಾಗೂ ಜಿಲ್ಲೆಗಳಿಂದಲೂ ಅಸಂಖ್ಯ ಮಾಲಾಧಾರಿಗಳು ಆಗಮಿಸಿದ್ದರು.