ಗುರುನಾಥ ಕುಲಕರ್ಣಿಗೆ ಸಹಾಯಹಸ್ತ

ಧಾರವಾಡ: ತುರ್ತು ಪರಿಸ್ಥಿತಿ, ಅಯೋಧ್ಯೆ ಹೋರಾಟ ಮತ್ತು ಹುಬ್ಬಳ್ಳಿ ಧ್ವಜ ಹೋರಾಟದಲ್ಲಿ ಪಾಲ್ಗೊಂಡು ಜನ ಸಂಘ, ಬಿಜೆಪಿ ಕಟ್ಟಿ ಬೆಳೆಸಲು ಸಾಕಷ್ಟು ಶ್ರಮಿಸಿದ್ದ, ಸದ್ಯ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಗುರುನಾಥ ಕುಲಕರ್ಣಿ ಅವರಿಗೆ ನೆರವು ನೀಡಲು ವಿವಿಧ ಸಂಘ- ಸಂಸ್ಥೆಗಳು ಮುಂದಾಗಿವೆ.

ಇಲ್ಲಿನ ಸಂಗೊಳ್ಳಿ ರಾಯಣ್ಣ ನಗರದಲ್ಲಿನ ಗುರುನಾಥ ಕುಲಕರ್ಣಿ ಅವರ ನಿವಾಸಕ್ಕೆ ಬುಧವಾರ ಭೇಟಿ ನೀಡಿದ್ದ ಎಬಿವಿಪಿ ಕಾರ್ಯಕರ್ತರಾಗಿದ್ದ, ಭಾರತೀಯ ಮಜ್ದೂರ ಸಂಘದ ಮುಖಂಡ ಸುಭಾಷಸಿಂಗ್ ಜಮಾದಾರ ಹಾಗೂ ಮುಖಂಡರು ಗುರುನಾಥ ಅವರಿಗೆ 32,500 ರೂ. ನಗದು ವಿತರಿಸಿದರು.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಾಯ ಮಾಡುವುದಲ್ಲದೆ, ಗುರುನಾಥ ಅವರ ಚಿಕಿತ್ಸೆ ವೆಚ್ಚ ಭರಿಸುವುದು ಹಾಗೂ ಅವರ ದ್ವಿತೀಯ ಪುತ್ರಿಯ ಮದುವೆಗೂ ನೆರವಾಗುವ ಭರವಸೆಯನ್ನು ಅವರು ನೀಡಿದರು.

ಕಳೆದ ನ. 18ರಂದು ಗುರುನಾಥ ಅವರ ಆರೋಗ್ಯ ವಿಚಾರಿಸಿದ ವಿಶ್ವ ಹಿಂದು ಪರಿಷತ್ ಸಂಚಾಲಿತ, ನಗರದ ಸಂಜೀವಿನಿ ಮೆಡಿಕಲ್ ಟ್ರಸ್ಟ್ ಪದಾಧಿಕಾರಿಗಳು, 5 ಸಾವಿರ ರೂ.ಗಳ ಚೆಕ್ ನೀಡಿದ್ದರು. ಅವರ ನಿವಾಸಕ್ಕೆ ಪ್ರತಿ ತಿಂಗಳು ಅಗತ್ಯವಿರುವ ದಿನಸಿ ವಸ್ತುಗಳು ಹಾಗೂ ಔಷಧಿ ವೆಚ್ಚವನ್ನು ಭರಿಸುವುದಾಗಿ ನಗರದ ಸುಧಾಮ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಗಲಗಲಿ ಭರವಸೆ ನೀಡಿದ್ದರು. ಮಂಗಳವಾರ ಗುರುನಾಥ ಅವರ ಮನೆಗೆ ಭೇಟಿ ನೀಡಿದ್ದ ಎಸ್.ಜಿ. ಕುಲಕರ್ಣಿ ಎಂಬುವವರು ಸಹ 10 ಸಾವಿರ ರೂ. ನೀಡಿದ್ದಾರೆ.

ಸಂಜೀವಿನಿ ಮೆಡಿಕಲ್ ಟ್ರಸ್ಟ್ ಕಾರ್ಯದರ್ಶಿ ಸುಧೀಂದ್ರ ದೇಶಪಾಂಡೆ, ವಾದಿರಾಜ ಕುಲಕರ್ಣಿ, ಸಂತೋಷ ಚವ್ಹಾಣ, ಸಂತೋಷ ಖೈರೆ, ಇತರರು ಬುಧವಾರ ಭೇಟಿ ನೀಡಿದ್ದರು.

ಎಲೆಮರೆ ಕಾಯಿ: ಕೇಂದ್ರ ಸಚಿವ ಅನಂತಕುಮಾರ ಅವರು ನಿಧನ ಹೊಂದಿದ ಸಂದರ್ಭದಲ್ಲಿ ಅವರು ಹೋರಾಟದಲ್ಲಿ ಭಾಗವಹಿಸಿದ್ದ ಭಾವಚಿತ್ರಗಳನ್ನು ಮಾಧ್ಯಮಗಳಿಗೆ ನೀಡಿದ್ದೆ. ಆದರೆ ಅದರಲ್ಲಿದ್ದ ಗುರುನಾಥ ಕುಲಕರ್ಣಿ ಅವರ ಮಾಹಿತಿ ಸಂಗ್ರಹಿಸಿ ಅವರ ಸ್ಥಿತಿಯನ್ನು ಜನರಿಗೆ ತಿಳಿಸಿದ ಶ್ರೇಯಸ್ಸು ‘ವಿಜಯವಾಣಿ’ ಪತ್ರಿಕೆ ಹಾಗೂ ‘ದಿಗ್ವಿಜಯ’ ವಾಹಿನಿಗೆ ಸಲ್ಲುತ್ತದೆ. ವರದಿ ಪ್ರಕಟವಾದ ನಂತರ ಹಳೇ ಎಬಿವಿಪಿ ಕಾರ್ಯಕರ್ತರು ನೀಡಿದ ಹಣವನ್ನು ಗುರುನಾಥ ಅವರಿಗೆ ತಲುಪಿಸಿದ್ದೇವೆ. ಹೋರಾಟದಲ್ಲಿ ಅನೇಕರು ಎಲೆಮರೆ ಕಾಯಿಯಂತೆ ಇರುತ್ತಾರೆ. ಆದರೆ ಅವರನ್ನು ಗುರುತಿಸಿದ ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ವಾಹಿನಿಗೆ ಧನ್ಯವಾದಗಳು. ಈ ಕಾರ್ಯವನ್ನು ಪ್ರಚಾರದ ಗೀಳಿನಿಂದ ಮಾಡುತ್ತಿಲ್ಲ. ನಿರಂತರವಾಗಿ ಅವರಿಗೆ ಸಹಾಯ ಮಾಡುವುದಲ್ಲದೆ, ದ್ವಿತೀಯ ಪುತ್ರಿಯ ವಿವಾಹದ ಏರ್ಪಾಟಿನ ಜವಾಬ್ದಾರಿ ತೆಗೆದುಕೊಳ್ಳಲು ಸಹ ಚಿಂತನೆ ನಡೆಸಿದ್ದೇವೆ ಎಂದು ಸುಭಾಷಸಿಂಗ್ ಜಮಾದಾರ ತಿಳಿಸಿದರು.