ಕೊಟ್ಟೂರು: ಶಿಕ್ಷಕರು ಬೋಧಿಸಿದ ಪಾಠ, ತೋರಿದ ಸತ್ಯಮಾರ್ಗ, ಪ್ರಾಮಾಣಿಕತೆ ವಿದ್ಯಾರ್ಥಿಗಳನ್ನು ರಕ್ಷಿಸಿದೆ. ಇದರಿಂದಾಗಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ನಿವೃತ್ತ ಶಿಕ್ಷಕ ಹಳ್ಳಿ ಸೋಮಣ್ಣ ಹೇಳಿದರು.

ಪಟ್ಟಣದ ಗಚ್ಚಿನಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಗುರುವಂದನಾ ಹಾಗೂ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದರು. ರಾಜ್ಯದ ವಿವಿಧೆಡೆ ಬದುಕು ಕಟ್ಟಿಕೊಂಡಿರುವ ನೀವೆಲ್ಲ ನಮ್ಮ ಮೇಲಿನ ಗೌರವದಿಂದ ಒಂದೆಡೆ ಸೇರಿ ಸನ್ಮಾನಿಸಿ ಗುರುಕಾಣಿಕೆ ನೀಡಿರುವುದು ನಮಗೆಲ್ಲ ಹೃದಯತುಂಬಿ ಬಂದಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಕಳೆದ 55 ವರ್ಷಗಳಲ್ಲಿ ನಿಧನರಾದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಗೌರವಾರ್ಥ ಮೌನಾಚರಣೆ ನಡೆಸಲಾಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ವೃತ್ತಿ, ಮಕ್ಕಳ ಕುರಿತು ಮಾಹಿತಿ ಹಂಚಿಕೊಂಡರು.
ಹಳೆಯ ವಿದ್ಯಾರ್ಥಿಗಳು ಸಾಂಸ್ಕೃತಿ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷ ಬಿ.ಪಂಪಾಪತಿ, ಗೌರವಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಉಪಾಧ್ಯಕ್ಷರಾದ ತಟಗಾರ ಖಾಸಿಂ ಸಾಹೇಬ್, ರವೀಂದ್ರ, ನಿವೃತ್ತ ಶಿಕ್ಷಕರಾದ ಜಂಬಣ್ಣ, ಕಂಟ್ಲಿ ಕೊಟ್ರೇಶಪ್ಪ, ಕೊಪ್ಪಳದ ಬಸವರಾಜಪ್ಪ, ದೇವರಮನಿ ಕರಿಯಪ್ಪ, ರಾಂಪುರ ಕುಬೇರಪ್ಪ ಹಾಗೂ ದೇವರಮನಿ ಚಾಮರಸ ಇದ್ದರು. ಶಾಂತಾ ಶಿವಮೊಗ್ಗ ನಿರೂಪಿಸಿದರು. ಬೇವೂರು ಮಲ್ಲಪ್ಪ ಸ್ವಾಗತಿಸಿದರು. ಇಂಜಿನಿಯರ್ ರಾಜಶೇಖರ್ ಪ್ರಾರ್ಥಿಸಿದರು.