ಘಟಬಂಧನ್ ನಾಯಕರಿಗೆ ಮೋದಿ ಸೋಲಿಸುವುದೇ ಗುರಿ

ಹುಣಸೂರು: ಮಹಾಘಟಬಂಧನ್ ನಾಯಕರಿಗೆ ಪ್ರಧಾನಿ ಮೋದಿಯನ್ನು ಸೋಲಿಸುವುದು ಗುರಿಯಾಗಿದೆಯೇ ಹೊರತು ದೇಶ ಕಟ್ಟುವ ರೀತಿ ಹೇಗೆ ಎಂದು ಆಲೋಚಿಸುವ ಕನಿಷ್ಟ ಜ್ಞಾನವೂ ಇಲ್ಲ ಎಂದು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಟೀಕಿಸಿದರು.

ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 60 ವರ್ಷದಲ್ಲಿ ಕಾಂಗ್ರೆಸ್ ಮಾಡದ ಸಾಧನೆಯನ್ನು ನರೇಂದ್ರ ಮೋದಿ ಹೇಗೆ ಮಾಡಲು ಸಾಧ್ಯವಾಗಿದೆ ಎಂಬ ಅನೇಕ ಪ್ರಶ್ನೆಗಳು ಕೆಲವು ನಾಯಕರಲ್ಲಿ ಕಾಡಿದೆ.

ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ದೇಶದ ಅಭಿವೃದ್ಧಿಗೆ ಒತ್ತು ನೀಡಲು ಸಾಧ್ಯ ಎಂಬುದನ್ನು ಮಾಡಿ ತೋರಿಸಿದ್ದಾರೆ ಈ ಚೌಕಿದಾರ್. ಆದರೆ ಮಹಾಘಟಬಂಧನ್ ನಾಯಕರಿಗೆ ಹಾಗೂ ರಾಜ್ಯದ ಮೈತ್ರಿ ಸರ್ಕಾರದ ನಾಯಕರಿಗೆ ದೇಶ ಕಟ್ಟುವ ಅಥವಾ ದೇಶಕ್ಕಾಗಿ ಯಾವ ನಾಯಕ ಬೇಕು ಎನ್ನುವ ಗುರಿ ಇಲ್ಲದೆ ಕೇವಲ ನರೇಂದ್ರ ಮೋದಿ ಸೋಲಿಸುವುದೇ ಗುರಿಯಾಗಿ ಹೋರಾಟ ನಡೆಸಿದ್ದಾರೆ. ಈ ನಾಯಕರಿಗೆ ಗಟ್ಟಿತನವಿಲ್ಲ ಎಂದರು.

ದೇಶದ ಸರ್ವ ಸಮಾಜದ ಆಸ್ತಿ ಗಂಗಾನದಿಯನ್ನು ಶುದ್ಧಗೊಳಿಸುವ ಪರಿಕಲ್ಪನೆಯನ್ನೇ ಹೊಂದದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 10 ವರ್ಷ ಆಡಳಿತ ನಡೆಸಿತ್ತು. ಮೋದಿ 5 ವರ್ಷದಲ್ಲಿ ಗಂಗೆ ಶುದ್ಧಗೊಳಿಸಿ ಬೃಹತ್ ಕುಂಭಮೇಳ ಆಯೋಜಿಸಿ ದೇಶದ ಜನರಿಗೆ ಶುದ್ಧ ಗಂಗೆಯನ್ನು ಮತ್ತೆ ಹಿಂತಿರುಗಿಸಿದ್ದಾರೆ. ಗಂಗಾನದಿ ಕುರಿತು ಕೆಟ್ಟದಾಗಿ ಮಾತನಾಡಿದ್ದ ಜಾತ್ಯತೀತ ಪಕ್ಷಗಳ ನಾಯಕರು ಇಂದು ಗಂಗಾ ಸ್ನಾನ ಮಾಡಿ ಪವಿತ್ರರಾಗಿದ್ದು ಸ್ಮರಣೀಯ ಎಂದರು. ಆರ್‌ಎಸ್‌ಎಸ್ ಮುಖ್ಯಸ್ಥ ರಘುವೀರ್ ಮತ್ತು ನಿವೃತ್ತ ಸೇನಾಧಿಕಾರಿಗಳು ಹಾಜರಿದ್ದರು.