ವಿಡಿಯೋ ಕಾನ್ಫರೆನ್ಸ್ನಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಸೂಚನೆ
ತುಮಕೂರು: ನಗರದ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಸೋಮವಾರ ನಡೆಯಲಿರುವ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ವಿವಿಧ ಕಸರತ್ತು ನಡೆಸಲಾರಂಭಿಸಿದ್ದು, ಜನರನ್ನು ಕರೆತರಲು ತಾಲೂಕುವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬರಬೇಕು. ಗುರಿ ನೀಡಿದಷ್ಟು ಜನರನ್ನು ಕರೆತರಬೇಕು ಎಂದು ಸೂಚಿಸಿದರು. ಸವಲತ್ತು ವಿತರಣೆಗೆ ಸಂಬಂಧಿಸಿದಂತೆ ಆಯ್ಕೆಯಾದ ಫಲಾನುಭವಿಗಳನ್ನು ಕಾರ್ಯಕ್ರಮದ ಸ್ಥಳಕ್ಕೆ ಜೋಪಾನವಾಗಿ ಕರೆತಂದು ಕಾರ್ಯಕ್ರಮ ಮುಗಿದ ನಂತರ ಅವರನ್ನು ಸ್ವಸ್ಥಳಕ್ಕೆ ಹಿಂದಿರುಗಿಸುವ ಹೊಣೆ ಆಯಾ ತಾಲೂಕಿನ ನೋಡಲ್ ಅಧಿಕಾರಿಗಳು ನಿರ್ವಹಿಸಬೇಕು. ಜವಾಬ್ದಾರಿ ನಿಭಾಯಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮಗಳಿಂದ ಆಗಮಿಸುವ ಫಲಾನುಭವಿಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ, ಕುಡಿಯುವ ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕಾರ್ಯಕ್ರಮದ ದಿನ ವಾಹನ ದಟ್ಟಣೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ, ಅಧಿಕಾರಿಗಳ ಮಾಹಿತಿಗಾಗಿ ವಾಹನ ಸಂಚರಿಸುವ ಮಾರ್ಗ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕುರಿತು ನಕಾಶೆ ಸಿದ್ಧಪಡಿಸಲಾಗಿದೆ. ತಾಲೂಕುಗಳಿಂದ ಫಲಾನುಭವಿಗಳನ್ನು ಕರೆತರುವ ವಾಹನಗಳನ್ನು ನಕಾಶೆಯಲ್ಲಿ ತೋರಿಸಿರುವಂತೆ ನಿಗದಿಪಡಿಸಿರುವ ಪಾರ್ಕಿಂಗ್ ಜಾಗದಲ್ಲಿಯೇ ನಿಲುಗಡೆ ಮಾಡಬೇಕು ಎಂದರು. ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಕಾರ್ಯಕ್ರಮಕ್ಕೆ ವಿವಿಧ ತಾಲೂಕುಗಳಿಂದ ಸುಮಾರು 1 ಲಕ್ಷ ಫಲಾನುಭವಿಗಳು ಬರುವ ನಿರೀಕ್ಷೆಯಿದ್ದು, ಆಯಾ ತಾಲೂಕಿನ ನೋಡಲ್ ಅಧಿಕಾರಿಗಳು ಫಲಾನುಭವಿಗಳನ್ನು ಕರೆ ತರುವ ಸಾರಿಗೆ ವಾಹನದ ಸಂಖ್ಯೆ, ಚಾಲಕರು ಹಾಗೂ ಅವರ ಮೊಬೈಲ್ ಸಂಖ್ಯೆಯ ಪಟ್ಟಿ ಹೊಂದಿರಬೇಕು. ಫಲಾನುಭವಿಗಳನ್ನು ವೇದಿಕೆ ಸ್ಥಳಕ್ಕೆ ಬೆಳಗ್ಗೆ 9.30ಕ್ಕೆ ಕರೆತರಬೇಕು ಎಂದರು.
ಪಾರ್ಕಿಂಗ್ ವ್ಯವಸ್ಥೆ: ಎಸ್.ಎಸ್.ಸರ್ಕಲ್ನಿಂದ ಕೆಇಬಿ ಸರ್ಕಲ್ವರೆಗೆ(ಎಡರಸ್ತೆಯಲ್ಲಿ ಮಾತ್ರ), ಕೆಇಬಿ ಸರ್ಕಲ್ನಿಂದ ಡಿ.ಸಿ.ಕಚೇರಿವರೆಗೆ(ಎಡ ರಸ್ತೆಯಲ್ಲಿ ಮಾತ್ರ), ಹಳೇ ಕೆಎಸ್ಆರ್ಟಿಸಿ ಬಸ್ ನಿಲ್ದಾಣ(ಹೆಲ್ತ್ ಕ್ಯಾಂಟೀನ್ ರಸ್ತೆ), ಗುಬ್ಬಿ ವೀರಣ್ಣ ಕಲಾಕ್ಷೇತ್ರದ ರಸ್ತೆ, ಶಿರಾ ಗೇಟ್ 80 ಅಡಿ ರಸ್ತೆ, ಉಪ್ಪಾರಹಳ್ಳಿ ಸೋಮೇಶ್ವರ ಶಾಲೆಯ ಆವರಣ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಲಘು ಮೋಟಾರು ವಾಹನ(ಎಲ್ಎಂವಿ)ಗಳಿಗಾಗಿ ನಗರದ ಬಿಷಪ್ ಸಾರ್ಜೆಂಟ್ ಶಾಲೆ ಮೈದಾನ, ಸಿದ್ಧಗಂಗಾ ಎಲಿಮೆಂಟರಿ ಶಾಲೆ ಮೈದಾನ, ರೈಲ್ವೆ ಸ್ಟೇಷನ್ ರಸ್ತೆ ಹಾಗೂ ಸಿ.ಎಸ್.ಐ. ಲೇಔಟ್ ರಸ್ತೆಯಲ್ಲಿ(ಬಿಷಪ್ ಸಾರ್ಜೆಂಟ್ ಶಾಲೆಯವರೆಗೆ) ಪಾರ್ಕಿಂಗ್ ವ್ಯವಸ್ಥೆ ಹಾಗೂ ದ್ವಿಚಕ್ರ ವಾಹನಗಳಿಗಾಗಿ ಚಾಮುಂಡೇಶ್ವರಿ ದೇವಸ್ಥಾನದ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.