ಗುದ್ದೋಡಿದ ‘ಚುನಾವಣಾ ಕರ್ತವ್ಯ’ದ ವಾಹನ

ಕಾರವಾರ: ಕುಡಿದ ಮತ್ತಿನಲ್ಲಿ ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿದ ಚುನಾವಣಾ ಕರ್ತವ್ಯನಿರತ ವಾಹನವನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಬೈಕ್ ಚಾಲಕ ಹರೀಶ ತೆಂಡುಲ್ಕರ್ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ. ಹಿಂಬದಿ ಸವಾರೆ ಅನುರಾಧಾ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತಪಡಿಸಿ ಪರಾರಿಯಾಗಲೆತ್ನಿಸಿದ ಟಾಟಾ ಸುಮೋ ವಾಹನದ ಚಾಲಕ ಹೊನ್ನಾವರ ಹೊದ್ಕೆಶಿರೂರಿನ ಸುಮಂತ ತಿಮ್ಮಪ್ಪ ಮುಕ್ರಿ ಪೊಲೀಸರ ವಶದಲ್ಲಿದ್ದಾನೆ.

ಹಿನ್ನೆಲೆ: ಚುನಾವಣೆ ಕರ್ತವ್ಯದಲ್ಲಿದೆ ಎಂದು ಬರೆದ ಖಾಸಗಿ ಬಾಡಿಗೆ ಟಾಟಾ ಸುಮೊ ಕಾರವಾರ ಬೈತಖೋಲ್ ಘಟ್ಟದ ಬಳಿ ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಅಮದಳ್ಳಿ ಬಳಿ ವಾಹನವನ್ನು ಸಾರ್ವಜನಿಕರು ಹಿಡಿದು ವಿಚಾರಿಸಿದ್ದಾರೆ. ವಾಹನ ಚಾಲಕ ಸಾಕಷ್ಟು ಕುಡಿದು ವಾಹನ ಚಲಾಯಿಸುತ್ತಿರುವುದು ಬೆಳಕಿಗೆ ಬಂದಿದೆ. ಆತನನ್ನು ಪೊಲೀಸರಿಗೊಪ್ಪಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದ ಸ್ಟೇಷನರಿ ವಸ್ತುಗಳು ಹಾಗೂ ಅಧಿಕಾರಿಗಳೂ ಇದ್ದರು ಎನ್ನಲಾಗಿದೆ. ಚುನಾವಣೆ ಸಂಬಂಧ ಸ್ಟೇಷನರಿ ವಸ್ತುಗಳ ಪೂರೈಕೆಗೆ ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡಲಾಗಿದೆ. ಆಯಾ ತಾಲೂಕಿನ ಸಿಬ್ಬಂದಿ ಬಂದು ಅದನ್ನು ಪಡೆದು ಹೋಗಲು ಸೂಚಿಸಲಾಗಿದೆ. ಯಾವ ಅಧಿಕಾರಿಗಳು ಬಂದಿದ್ದರು ಎಂಬ ಮಾಹಿತಿ ನಮಗಿರುವುದಿಲ್ಲ ಎಂದು ಚುನಾವಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.