ಗುತ್ತಿಗೆದಾರ, ಲಾರಿ ಮಾಲೀಕರಿಗೆ ನೋಟಿಸ್

ಶಿವಮೊಗ್ಗ: ಕೆಎಸ್​ಆರ್​ಟಿಸಿ ಶಿವಮೊಗ್ಗ ಡಿಪೋಗೆ ಮೇ 13ರಂದು ಪೂರೈಕೆಯಾದ ಡೀಸೆಲ್​ನಲ್ಲಿ 110 ಲೀಟರ್ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಕಂಪನಿ, ಟ್ರಾನ್ಸ್​ಪೋರ್ಟ್ ಕಾಂಟ್ರಾಕ್ಟರ್ ಹಾಗೂ ಲಾರಿ ಮಾಲೀಕರಿಗೆ ನೋಟಿಸ್ ನೀಡಲು ಅಳತೆ ಮತ್ತು ಮಾಪನ ಇಲಾಖೆ ಮುಂದಾಗಿದೆ.

ಮೇ 13ರಂದು ಮಂಗಳೂರು ಮೂಲದ ಟ್ಯಾಂಕರ್ ಮೂಲಕ ಶಿವಮೊಗ್ಗ ಕೆಎಸ್​ಆರ್​ಟಿ ಡಿಪೋಗೆ 12 ಸಾವಿರ ಲೀಟರ್ ಡೀಸೆಲ್ ಪೂರೈಕೆಯಾಗಬೇಕಿತ್ತು. ಆದರೆ ಅದರಲ್ಲಿ 110 ಲೀಟರ್ ಕಡಿಮೆ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಈಗಾಗಲೆ ಎಫ್​ಐಆರ್ ದಾಖಲಾಗಿದ್ದು, ಮುಂದುವರಿದ ಭಾಗವಾಗಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗುತ್ತಿದೆ.

ವಂಚನೆ ನಡೆದಿದ್ದು ಹೇಗೆ?ಪ್ರತಿ ಟ್ಯಾಂಕರ್​ಗೂ ಡಿಪ್ಪಿಂಗ್ ರಾಡ್ ಎಂಬ ಇಂಧನ ಮಾಪನ ನೀಡಲಾಗುತ್ತದೆ. ಟ್ಯಾಂಕರ್​ನಲ್ಲಿ ಇಂಧನ ತುಂಬಿದ ಬಳಿಕ ಇದರಲ್ಲಿ ಒಮ್ಮೆ ಪ್ರಮಾಣ ಖಾತ್ರಿ ಮಾಡಿಕೊಳ್ಳಲಾಗುತ್ತದೆ. ಬಳಿಕ ಅದನ್ನು ಪೂರೈಕೆ ಮಾಡುವ ಸ್ಥಳದಲ್ಲಿ ಮತ್ತೊಮ್ಮೆ ಇಂಧನ ಪ್ರಮಾಣ ಲೆಕ್ಕ ಹಾಕಲಾಗುತ್ತದೆ.

ಕೆಎಸ್​ಆರ್​ಟಿಸಿ ಡಿಪೋಗೆ ಬಂದ ಟ್ಯಾಂಕರ್ ಡಿಪ್ಪಿಂಗ್ ರಾಡ್​ಅನ್ನು ಅಕ್ರಮವಾಗಿ ಪರಿವರ್ತಿಸಲಾಗಿತ್ತು. ಯಾವಾಗಲೂ ಒಂದೇ ಅಳತೆ ತೋರುವಂತೆ ಮಾರ್ಪಾಡು ಮಾಡಲಾಗಿತ್ತು. ಟ್ಯಾಂಕರ್​ನ ಒಂದು ಕಂಪಾರ್ಟ್​ವೆುಂಟ್​ನಲ್ಲಿ ನಾಲ್ಕು ಸಾವಿರ ಲೀಟರ್ ಇಂಧನ ಇರುತ್ತದೆ. ಮೂರನೇ ಕಂಪಾರ್ಟ್​ವೆುಂಟ್​ನಿಂದ 50 ಲೀಟರ್ ಡೀಸೆಲ್ ತೆಗೆದು ಡಿಪ್ಪಿಂಗ್ ರಾಡ್ ಮೂಲಕ ಅಳತೆ ಮಾಡಿದಾಗಲೂ ನಾಲ್ಕು ಸಾವಿರ ಲೀಟರ್ ತೋರಿಸಿದೆ.

ಇದರಿಂದ ಅನುಮಾನಗೊಂಡ ಕೆಎಸ್​ಆರ್​ಟಿಸಿ ಸಿಬ್ಬಂದಿ ಕೂಡಲೆ ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಚ್.ಎಸ್.ರಾಜುಗೆ ದೂರು ಸಲ್ಲಿಸಿದ್ದರು. ಕಾನೂನು ಮಾಪನಶಾಸ್ತ್ರ ಇಲಾಖೆ ನಿರೀಕ್ಷಕಿ ಧನಲಕ್ಷ್ಮೀ ಅವರೊಂದಿಗೆ ಸ್ಥಳಕ್ಕೆ ಬಂದು ತಪಾಸಣೆ ನಡೆಸಿದ ರಾಜು ಅವರಿಗೆ ಟ್ಯಾಂಕರ್​ನಲ್ಲಿ 110 ಲೀಟರ್ ಡೀಸೆಲ್ ಕಡಿಮೆ ಇರುವುದು ತಿಳಿದುಬಂದಿದೆ.

ಚಾಲಕ ಪರಾರಿ:ಡೀಸೆಲ್ ಕೊರತೆಯಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇದೀಗ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ದೊಡ್ಡಪೇಟೆ ಠಾಣೆಯಲ್ಲಿ ವಂಚನೆ ದೂರು ದಾಖಲಿಸಿದ್ದು, ಜೆಎಂಎಫ್​ಸಿ ನ್ಯಾಯಾಲಯಕ್ಕೆ ಎಫ್​ಐಆರ್ ಸಲ್ಲಿಕೆಯಾಗಿದೆ ಎಂದು ಸಹಾಯಕ ನಿಯಂತ್ರಕ ಎಚ್.ಎಸ್.ರಾಜು ತಿಳಿಸಿದ್ದಾರೆ.

ದಿನಕ್ಕೆ 10 ಸಾವಿರ ಲೀಟರ್:ಶಿವಮೊಗ್ಗ ಕೆಎಸ್​ಆರ್​ಟಿಸಿ ಡಿಪೋದಲ್ಲಿ ವೋಲ್ವೋ ಸೇರಿ ಒಟ್ಟು 150 ಬಸ್​ಗಳಿವೆ. ಪ್ರತಿ ದಿನ ಇಲ್ಲಿಗೆ 8ರಿಂದ 10 ಸಾವಿರ ಲೀಟರ್ ಡೀಸೆಲ್ ಅವಶ್ಯಕತೆಯಿದೆ. ಈ ಹಿಂದೆ ಇಂತಹ ಘಟನೆ ಬೆಳಕಿಗೆ ಬಂದಿಲ್ಲ ಎನ್ನಲಾಗುತ್ತಿದೆ. ಆದರೆ ಈ ಪ್ರಕರಣ ಕೆಎಸ್​ಆರ್​ಟಿಸಿಗೆ ಎಚ್ಚರಿಕೆಯಾಗಿದೆ.

Leave a Reply

Your email address will not be published. Required fields are marked *