ಗುತ್ತಿಗೆದಾರರ ಜತೆ ನಿವಾಸಿಗಳ ಮಾತಿನ ಚಕಮಕಿ

ಭದ್ರಾವತಿ: ರಸ್ತೆ ವಿಸ್ತರಣೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ಹೊಸಮನೆ ಮುಖ್ಯರಸ್ತೆಯ ನಿವಾಸಿಗಳು ಕಾಮಗಾರಿಗೆ ಬಳಸಲಾಗಿದ್ದ ಹಿಟಾಚಿ ವಾಹನವನ್ನು ತಡೆದು, ಗುತ್ತಿಗೆದಾರರ ಜತೆ ಮಾತಿನ ಚಕಮಕಿ ನಡೆಸಿದರು.

ನಗರದ ಹೊಸಮನೆ ಮುಖ್ಯರಸ್ತೆಯಲ್ಲಿ ರಸ್ತೆ ವಿಸ್ತರಣೆ ಕಾರ್ಯ ಈಗಾಗಲೆ ಆರಂಭಗೊಂಡಿದ್ದು ರಸ್ತೆ ಮಧ್ಯ ಭಾಗದಿಂದ 20 ಅಡಿಯಂತೆ ಎರಡೂ ಬದಿಯಿಂದ 40 ಅಡಿ ಅಂತರದಲ್ಲಿ ವಿಸ್ತರಣೆಗೆ ನಗರಸಭೆ ಅಧಿಕಾರಿಗಳು ಅಸ್ತು ಎಂದಿದ್ದಾರೆ. ಪೌರಾಯುಕ್ತ ಮನೋಹರ್ ಅವರೇ ಸ್ಥಳಕ್ಕೆ ಬಂದು ಜಾಗ ಗುರುತು ಮಾಡಿದ್ದರೂ ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರು ಒಂದೇ ಭಾಗದಲ್ಲಿ ಹೆಚ್ಚಿನ ಜಾಗವನ್ನು ಅಗೆಯುತ್ತಿದ್ದು ಮತ್ತೊಂದು ಕಡೆ ಕಿಂಚಿತ್ತು ವಿಸ್ತೀರ್ಣಕ್ಕೆ ಕೈ ಹಾಕುತ್ತಿಲ್ಲ. ಅಧಿಕಾರಿಗಳು ತೋರಿಸಿರುವ ಜಾಗವನ್ನು ಬಿಟ್ಟು ಗುತ್ತಿಗೆದಾರರು ಅವರ ಮನಸ್ಸಿಗೆ ಬಂದಂತೆ ಮಾಡುತ್ತಿದ್ದಾರೆ. ಇದರಿಂದಾಗಿ ನಾವು ರಸ್ತೆ ವಿಸ್ತರಣೆ ಕಾರ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ನಗರಸಭೆ ಸದಸ್ಯ ವಿ. ಕದಿರೇಶ್ ಸ್ಥಳೀಯರನ್ನು ಸಮಾಧಾನಪಡಿಸುವ ಮೂಲಕ ಮತ್ತೊಮ್ಮೆ ಅಳತೆ ಮಾಡಲು ಮುಂದಾದರು. ನಗರಸಭೆ ಆಯುಕ್ತರು ಹಾಗೂ ಇಂಜಿನಿಯರ್ ಹೇಳಿದಂತೆ ಗುತ್ತಿಗೆದಾರರು ಕೆಲಸ ಮಾಡಬೇಕು. ರಸ್ತೆಯ ಎರಡೂ ಬದಿ ಸಮಾನವಾಗಿ ವಿಭಾಗಿಸುವ ಮೂಲಕ ಕಾಮಗಾರಿ ಆರಂಭಿಸಿ ಎಂದು ಗುತ್ತಿಗೆದಾರರಿಗೆ ತಿಳಿಸಿದರು.