Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಗುಣಮಟ್ಟದ ಶಿಕ್ಷಣ ಸಿಗಲಿ

Wednesday, 17.01.2018, 3:03 AM       No Comments

ಜ್ಞಾನಾಧಾರಿತವಾದ ಈ ಯುಗದಲ್ಲಿ ಶಿಕ್ಷಣ ರಾಷ್ಟ್ರನಿರ್ವಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಗ್ರಾಮೀಣ ಭಾರತದಲ್ಲಿ ಶೈಕ್ಷಣಿಕ ಸುಧಾರಣೆಗಳು ತೀವ್ರ ಪ್ರಮಾಣದಲ್ಲಿ ನಡೆಯಬೇಕು ಎಂಬ ಆಗ್ರಹ, ಜನಾಶಯ ಇದ್ದೇ ಇದೆ. ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಅನುದಾನ ಹರಿಸುತ್ತಿವೆ. ಪ್ರತಿ ವರ್ಷ ಆಯವ್ಯಯದಲ್ಲಿ ಈ ರಂಗಕ್ಕೆ ನೀಡಲಾಗುವ ಅನುದಾನ ಹೆಚ್ಚಿಸಲಾಗುತ್ತಿದೆ. ಇದು ಸರಿಯೇ. ಆದರೆ, ಇದರಿಂದ ನಿಜಕ್ಕೂ ಗುಣಮಟ್ಟದ ಶಿಕ್ಷಣ ಲಭ್ಯವಾಗುತ್ತಿದೆಯೇ? ಮಕ್ಕಳ ಕೌಶಲ ವಿಕಾಸವಾಗುತ್ತಿದೆಯೇ ಎಂದು ಗಮನಿಸಿದರೆ ಉತ್ತರ ನಿರಾಶಾದಾಯಕವಾಗಿದೆ. ಎಎಸ್​ಇಆರ್ (Annual Status of Education Report) ಮಂಗಳವಾರ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿ ಈ ಕುರಿತಾದ ಚಿತ್ರಣವನ್ನು ತೆರೆದಿಟ್ಟಿದೆ.

ಗ್ರಾಮೀಣ ಭಾಗದ 14-16 ವಯೋಮಾನದ ಮಕ್ಕಳ ಪೈಕಿ ಶೇಕಡ 25 ಮಕ್ಕಳು ಮಾತೃಭಾಷೆಯಲ್ಲೇ ಸರಾಗವಾಗಿ ಓದಲು ಅಸಮರ್ಥರಾಗಿದ್ದರೆ ಶೇ.57 ಚಿಣ್ಣರು ಗಣಿತದ ಸಣ್ಣ ಲೆಕ್ಕವನ್ನು ಪರಿಹರಿಸಲೂ ತುಂಬ ಕಷ್ಟಪಡುತ್ತಾರೆ. ಶೇ.36 ಮಕ್ಕಳಿಗೆ ದೇಶದ ರಾಜಧಾನಿ ಹೆಸರು ಗೊತ್ತಿಲ್ಲ, ಶೇ.21 ಮಕ್ಕಳಿಗಂತೂ ತಾವು ಯಾವ ರಾಜ್ಯದಲ್ಲಿ ವಾಸಿಸುತ್ತಿದ್ದೇವೆ ಎಂಬುದರ ಅರಿವಿಲ್ಲ. ದೇಶದ 24 ರಾಜ್ಯಗಳ 28 ಜಿಲ್ಲೆಗಳ 1641 ಗ್ರಾಮಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ದುಡ್ಡನ್ನು ಎಣಿಸುವ, ಗಡಿಯಾರ ನೋಡಿ ಸಮಯ ಹೇಳುವ, ತೂಕವನ್ನು ಕಿಲೋಗ್ರಾಂಗಳಲ್ಲಿ ಹೇಳುವ ಸಣ್ಣ ಸಣ್ಣ ವಿಷಯಗಳಲ್ಲೂ ವಿದ್ಯಾರ್ಥಿಗಳು ವಿಫಲರಾಗಿದ್ದಾರೆ ಎಂಬುದು ಶೋಚನೀಯ ಸಂಗತಿ. ವಿಚಿತ್ರ ಎಂದರೆ ಮೊಬೈಲ್ ಬಳಕೆಯಲ್ಲಿ ಮುಂದಿರುವ ಈ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದಿದ್ದಾರೆ.

ಈಗ ಸರ್ಕಾರಗಳು ಮಾತ್ರವಲ್ಲದೆ ಕಾಪೋರೇಟ್ ಸಂಸ್ಥೆಗಳು ಕೂಡ ಶೈಕ್ಷಣಿಕ ರಂಗದ ಅಭಿವೃದ್ಧಿಗೆ ಒತ್ತು ನೀಡುತ್ತಿವೆ. ಬಹುತೇಕ ಅನುದಾನ ಶಾಲಾ ಕಟ್ಟಡ, ಇತರೆ ಮೂಲಸೌಕರ್ಯ ಒದಗಿಸುವಿಕೆಯಲ್ಲಿ ವೆಚ್ಚವಾಗುತ್ತಿದೆ. ಈ ಸೌಲಭ್ಯಗಳು ಅಗತ್ಯ ಹೌದಾದರೂ ಶಿಕ್ಷಣದ ಗುಣಮಟ್ಟವೇ ಸುಧಾರಣೆ ಆಗದಿದ್ದರೆ ಏನು ಪ್ರಯೋಜನ? ಶಿಕ್ಷಣ ರಂಗದ ಸುಧಾರಣೆ ಎಂದರೆ ಕೇವಲ ಶಾಲಾ ಕಟ್ಟಡಗಳನ್ನು ಕಟ್ಟುವುದಾಗಲಿ ಅಥವಾ ‘ಇಷ್ಟು ಜನರನ್ನು ಶಾಲೆಗೆ ಸೇರಿಸಲಾಗಿದೆ’ ಎಂಬ ತಾಂತ್ರಿಕ ಮಾಹಿತಿಗಳಾಗಲಿ ಅಲ್ಲ. ವಿದ್ಯಾರ್ಥಿಗಳು ದೇಶದ ಭಾವಿಪ್ರಜೆಗಳು. ಕಲಿಕೆಯ ಮೂಲಕ ಜ್ಞಾನ ವೃದ್ಧಿಸಿಕೊಳ್ಳುವ, ಆ ಮೂಲಕ ವ್ಯಕ್ತಿತ್ವ ಕಟ್ಟಿಕೊಳ್ಳುವ ಸಮಯದಲ್ಲಿ ಇವರು ಹೆಸರಿಗಷ್ಟೇ ಶಿಕ್ಷಣ ಪಡೆಯುತ್ತಿದ್ದಾರೆ ವಿನಾ ಯಾವುದೇ ಕೌಶಲಗಳು ಬೆಳೆಯುತ್ತಿಲ್ಲ ಎಂಬ ವಾಸ್ತವವನ್ನು ಈ ಸಮೀಕ್ಷೆ ತೆರೆದಿಟ್ಟಿದೆ. ಗಣಿತ, ವಿಜ್ಞಾನ, ಇಂಗ್ಲಿಷ್ ವಿಷಯಗಳು ಹಳ್ಳಿ ಮಕ್ಕಳ ಪಾಲಿಗೆ ಕಬ್ಬಿಣದ ಕಡಲೆಯಾಗಿಯೇ ಉಳಿಯುತ್ತಿದ್ದು, ಮುಂದೆ ಇದು ಅವರ ವೃತ್ತಿಜೀವನದ ಮೇಲೂ ಪರಿಣಾಮ ಬೀರಿ ಇತರರೊಡನೆ ಸ್ಪರ್ಧಿಸಲು ಆಗದಂಥ ವಾತಾವರಣ ಸೃಷ್ಟಿಯಾಗಿದೆ. ಈ ಸ್ಥಿತಿ ಬದಲಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಪ್ರಮುಖ ಆದ್ಯತೆ ನೀಡಬೇಕು. ಆಗ ಮಾತ್ರ, ನಿಜವಾದ ಪರಿವರ್ತನೆ ಕಾಣಲು ಸಾಧ್ಯ.

Leave a Reply

Your email address will not be published. Required fields are marked *

Back To Top