ಗುಣಮಟ್ಟದ ಶಿಕ್ಷಣ ಅಗತ್ಯ

ಹುಬ್ಬಳ್ಳಿ: ದೇಶದಲ್ಲಿ ಹಲವು ವಿಶ್ವವಿದ್ಯಾಲಯಗಳು, ಕಾಲೇಜ್​ಗಳಿದ್ದರೂ ಉನ್ನತ ಶಿಕ್ಷಣದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳ ಕೊರತೆ ಇದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ. ಹನುಮಂತಯ್ಯ ಹೇಳಿದರು.

ಇಲ್ಲಿಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯ ಆಂತರಿಕ ಗುಣಮಟ್ಟ ಆಶ್ವಾಸನಾ ಘಟಕ (ಐ.ಕ್ಯೂ.ಎ.ಸಿ) ನ್ಯಾಕ್: ಉನ್ನತ ಶಿಕ್ಷಣದ ಗುಣಮಟ್ಟದ ಹೊಸ ರೂಪು- ರೇಷೆಗಳು ಮತ್ತು ವಾರ್ಷಿಕ ಉತ್ಕೃಷ್ಟತಾ ವರದಿ ಕುರಿತು ಏರ್ಪಡಿಸಿದ್ದ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನಗರ ಪ್ರದೇಶಗಳಲ್ಲಿ ಉತ್ತಮ ಕಾಲೇಜ್​ಗಳಿವೆ. ಆದರೆ, ಗ್ರಾಮೀಣ ಮಟ್ಟದಲ್ಲಿ ಇಲ್ಲ. ಹಾಗಾಗಿ, ಗ್ರಾಮೀಣ ಮಟ್ಟದಲ್ಲಿಯೂ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು. ಸದ್ಯ ಇರುವ ಕಾಲೇಜ್ ಆಡಳಿತ ಮಂಡಳಿಗಳು ಹಳೆಯ ವಿದ್ಯಾರ್ಥಿಗಳ ಪಟ್ಟಿ ಮಾಡಿ, ಅವರಿಂದ ದೇಣಿಗೆ ಸಂಗ್ರಹಿಸುವ ಮೂಲಕ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು. ಈ ಕಾಲೇಜ್ ಸತತ ಮೂರು ಬಾರಿ ನ್ಯಾಕ್ ಎ ಗ್ರೇಡ್​ವಾನ್ಯತೆ ಹೊಂದಿರುವುದು ಸಂತಸದ ಸಂಗತಿ. ಪ್ರತಿಯೊಂದು ಕಾಲೇಜ್ ನ್ಯಾಕ್ ಮಾನ್ಯತೆ ಪಡೆಯಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಕೆ.ಎಲ್.ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪಿ.ಸಿ. ಜಾಬಿನ್ ಕಾಲೇಜ್​ನ ನಿವೃತ್ತ ಪ್ರಾಂಶುಪಾಲ ಡಾ. ವಿ.ಬಿ. ಹಿರೇಮಠ, ನಿಪ್ಪಾಣಿಯ ಪ್ರಾಂಶುಪಾಲ ಡಾ. ಎಂ.ಬಿ. ಕೊಥಳೆ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ಕೆಎಲ್​ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಶಂಕರಣ್ಣ ಮುನವಳ್ಳಿ, ಇತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ.ಎಲ್.ಡಿ. ಹೊರಕೇರಿ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಸುಜಾತಾ ಪಟ್ಟೇದ ನಿರೂಪಿಸಿದರು. ಪ್ರೊ. ಎಸ್.ಎನ್. ಎಮ್ಮಿ ವಂದಿಸಿದರು.