ಕೆ.ಎಂ.ದೊಡ್ಡಿ: ರೋಗಿಗಳನ್ನು ಅಲೆದಾಡಿಸದೆ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಶಾಸಕ ಕದಲೂರು ಉದಯ್ ವೈದ್ಯರಿಗೆ ಸೂಚನೆ ನೀಡಿದರು.
ಕೆ.ಎಂ.ದೊಡ್ಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಆರೋಗ್ಯ ರಕ್ಷಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಳ್ಳಿಗಾಡಿನ ಪ್ರದೇಶದ ಜನರು, ನಗರ ಪ್ರದೇಶಗಳಿಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆಯುವುದು ಅವರಿಗೆ ತೊಂದರೆಯಾಗಬಹುದು. ಆರ್ಥಿಕ ಮುಗ್ಗಟ್ಟು ಕೂಡ ಎದುರಾಗಬಹುದು. ಈ ನಿಟ್ಟಿನಲ್ಲಿ ಇಲ್ಲೇ ಅವರಿಗೆ ಅಗತ್ಯ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ವೈದ್ಯರು ಯಾವ ಯಾವ ಸೌಲಭ್ಯಗಳು ಬೇಕು ಎಂಬುದನ್ನು ಪಟ್ಟಿಮಾಡಿ ನೀಡಿ, ಅವುಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ. ಜತೆಗೆ ಮಕ್ಕಳ ತಜ್ಞರನ್ನು ನೇಮಿಸಲು ಶೀಘ್ರದಲ್ಲಿ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರ, ಯಾವುದೇ ತಾಲೂಕು ಆಸ್ಪತ್ರೆಗೆ ಕಡಿಮೆ ಇಲ್ಲ ಎಂಬಂತೆ ಕಾರ್ಯನಿರ್ವಹಿಸುತ್ತಿದ್ದು, ಹೆರಿಗೆಗೆ ಬರುವ ಗರ್ಭಿಣಿಯರನ್ನು ಆರೋಗ್ಯ ಕೇಂದ್ರದಲ್ಲೇ ಸಹಜ ಹೆರಿಗೆ ಮಾಡಿಸಲು ಸಂಬಂಧಪಟ್ಟ ವೈದ್ಯರು ನಿಗಾವಹಿಸಬೇಕು. ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಮಾಡದೇ ಕರ್ತವ್ಯ ಪ್ರಜ್ಞೆ ಮೆರೆಯಬೇಕು ಎಂದು ನಿರ್ದೇಶಿಸಿದರು.
ಆಸ್ಪತ್ರೆಯಲ್ಲಿ ಎಕ್ಸ್-ರೇ, ಲ್ಯಾಬ್‌ಗಳು ನೂತನ ತಂತ್ರಜ್ಞಾನದಿಂದ ಕೂಡಿದ್ದು, ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೂ ರೋಗಿಗಳು ಖಾಸಗಿ ಆಸ್ಪತ್ರೆ, ಪ್ರಯೋಗಾಲಯಗಳಿಗೆ ಹೋಗಬೇಕಿದೆ ಎಂಬ ದೂರುಗಳಿದ್ದು, ಇದು ನಿಲ್ಲಬೇಕು. ಈ ಬಗ್ಗೆ ಬಹುತೇಕ ವೈದ್ಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕೆಲವು ವೈದ್ಯರು ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದು ಅಂಥವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಮಣಿಗೆರೆ ಮತ್ತು ಅಣ್ಣೂರು ಗ್ರಾಮದಲ್ಲಿ ಉಪಕೇಂದ್ರಗಳನ್ನು ಸ್ಥಾಪಿಸಲು ನಿವೇಶನವಿದ್ದು, ಅಲ್ಲಿ ಕಟ್ಟಡ ನಿರ್ಮಿಸಲು ಅಗತ್ಯ ಕ್ರಮ ವಹಿಸುತ್ತೇನೆ. ಇದರಿಂದ ಅಲ್ಲಿನ ಸ್ಥಳೀಯ ರೋಗಿಗಳಿಗೆ ಅಲ್ಲೆ ಚಿಕಿತ್ಸೆ ದೊರೆಯಲಿದೆ ಎಂದರು.
ಆರೋಗ್ಯ ರಕ್ಷಾ ಸಮಿತಿ ಸದಸ್ಯ ತೊರೆಬೊಮ್ಮನಹಳ್ಳಿ ಸಿದ್ದರಾಮೇಗೌಡ ಮಾತನಾಡಿದರು. ತಾಪಂ ಇಒ ಸಂದೀಪ್, ಟಿಎಚ್‌ಒ ಡಾ.ರವೀಂದ್ರ ಬಿ.ಗೌಡ, ಆಡಳಿತ ವೈದ್ಯಾಧಿಕಾರಿ ಡಾ.ಜಗದೀಶ್, ಹೆಲ್ತ್ ಇನ್ಸ್‌ಪೆಕ್ಟರ್ ತಮ್ಮೇಗೌಡ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ತೊರೆಬೊಮ್ಮನಹಳ್ಳಿ ಸಿದ್ದರಾಮೇಗೌಡ, ಸವಿತಾ ದೊಡ್ಡೇಗೌಡ, ಅಣ್ಣೂರು ಚಿಕ್ಕಣ್ಣ, ಗುಡಿಗೆರೆ ಪ್ರಸಾದ್ ಇತರರು ಇದ್ದರು.