ಗುಡ್ಡ ಕುಸಿಯುವ ಆತಂಕದಲ್ಲಿ ಜನ

ಕಾರವಾರ: ಜಿಲ್ಲೆಯ ಕರಾವಳಿಗುಂಟ ಚತುಷ್ಪಥ ಕಾಮಗಾರಿ ಕೈಗೊಂಡ ಐಆರ್​ಬಿ ಗುತ್ತಿಗೆ ಕಂಪನಿ ಮಳೆಗಾಲದ ಪೂರ್ವ ತಯಾರಿ ನಡೆಸದ ಕಾರಣ ಮೊದಲ ಮಳೆಗೇ ಹಲವೆಡೆ ಸಮಸ್ಯೆ ಕಾಣಿಸಿಕೊಂಡಿದೆ. ಮಂಗಳವಾರ ಕುಮಟಾ ಹಾಗೂ ಅಂಕೋಲಾದಲ್ಲಿ ಹಲವೆಡೆ ನೀರು ನುಗ್ಗಿ ಸಮಸ್ಯೆ ಎದುರಾಗಿತ್ತು.

ಕಾಮಗಾರಿ ಪ್ರಾರಂಭವಾದ ನಂತರ ಎರಡು ಮಳೆಗಾಲಗಳಲ್ಲೂ ಭಾರಿ ಅವಘಡಗಳು ಸಂಭವಿಸಿದ ನಂತರವೂ ಕಂಪನಿ ಎಚ್ಚೆತ್ತುಕೊಂಡು ಪೂರ್ವ ತಯಾರಿ ಕೈಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಜಿಲ್ಲಾಡಳಿತ ಮೌನ ವಹಿಸಿರುವುದು ಅಚ್ಚರಿ ಮೂಡಿಸಿದೆ.

ಸಮಸ್ಯೆ ಏನು..?

ಕಾರವಾರದಿಂದ ಭಟ್ಕಳವರೆಗೆ ಹಲವು ಕಡೆಗಳಲ್ಲಿ ಗುಡ್ಡಗಳನ್ನು ಅರ್ಧಕ್ಕೇ ಕೊರೆದು ಬಿಡಲಾಗಿದೆ. ಯಾವುದೇ ಕ್ಷಣದಲ್ಲೂ ಉದುರಿ ಬೀಳುವ ಆತಂಕ ಎದುರಾಗಿದೆ. ಗುಡ್ಡಗಳ ಮೇಲಿಂದ ಹರಿದು ಬರುವ ನೀರು ಹಳ್ಳ ಕೊಳ್ಳ ಸೇರಲು ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಚರಂಡಿಗಳನ್ನು ಅರೆಬರೆ ಮಾಡಿ ಬಿಡಲಾಗಿದೆ. ಕಲ್ವರ್ಟ್​ಗಳ ನೀರು ಹರಿಯಲು ವ್ಯವಸ್ಥೆ ಮಾಡಿಲ್ಲ. ಸೇತುವೆ ನಿರ್ವಣಕ್ಕಾಗಿ ಹೊಳೆ, ಹಳ್ಳ, ನದಿಗಳಿಗೆ ಅಡ್ಡಲಾಗಿ ಹಾಕಿದ ಮಣ್ಣು ತೆರವು ಮಾಡಿಲ್ಲ. ಇದರಿಂದ ಹಲವೆಡೆ ಕೃತಕ ಪ್ರವಾಹ ಉದ್ಭವಿಸುವ ಸಾಧ್ಯತೆ ಇದೆ. ಗುಡ್ಡ ಕುಸಿಯುವ ಆತಂಕ ಕಾಡಿದೆ.

ಇನ್ನಾದರೂ ಎಚ್ಚೆತ್ತುಕೊಳ್ಳಲಿ: ಇನ್ನಾದರೂ ಕಂಪನಿ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಡ್ಡದಿಂದ ಬರುವ ನೀರನ್ನು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಚರಂಡಿಗಳು, ಕಲ್ವರ್ಟ್​ಗಳಿಂದ ಗದ್ದೆಗಳು, ಜನವಸತಿ ಪ್ರದೇಶಗಳತ್ತ ನೀರು ಹರಿಯುವಂತಿದ್ದರೆ ಅದಕ್ಕೆ ಪರ್ಯಾಯ ಮಾರ್ಗ ತೋರಿಸಬೇಕು. ಗುಡ್ಡ ಕುಸಿಯುವ ಸ್ಥಳಗಳನ್ನು ಗುರುತಿಸಿ ಅಲ್ಲಿನ ಮನೆಗಳ ಜನರನ್ನು ಸ್ಥಳಾಂತರ ಮಾಡಬೇಕು. ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗ ಮಾಡಿಕೊಡಬೇಕು. ಹಳ್ಳಗಳಿಗೆ ಹಾಕಿದ ಮಣ್ಣನ್ನು ತೆರವು ಮಾಡಬೇಕು. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.

ಶಾಸಕಿ ರೂಪಾಲಿ ಭೇಟಿ: ಅಂಕೋಲಾ ತಾಲೂಕಿನ ಸಗಡಗೇರಿ ಗ್ರಾಪಂ ವ್ಯಾಪ್ತಿಯ ಬಳಲೆ ಗ್ರಾಮದಲ್ಲಿ ಐಆರ್​ಬಿ ಕಂಪನಿಯ ಅವೈಜ್ಞಾನಿಕ ಚತುಷ್ಪಥ ಕಾಮಗಾರಿಯಿಂದ ಮಂಗಳವಾರ ಮಳೆಗೆ ನೀರು ನುಗ್ಗಿ ಹಾನಿ ಉಂಟಾಗಿತ್ತು. ಶಾಸಕಿ ರೂಪಾಲಿ ನಾಯ್ಕ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಐಆರ್​ಬಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅವರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲೇ ನಿಂತು ಯಂತ್ರ ಕರೆಸಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಿಕೊಟ್ಟರು.

ಅಪಘಾತಕ್ಕೆ ಕಾರಣವಾಗುತ್ತಿದೆ ದಾರಿ

  • ಹಲವೆಡೆ ಇದ್ದಕ್ಕಿದ್ದಂತೆ ತಗ್ಗು ಅಥವಾ ಏರು ಸೃಷ್ಟಿ ಮಾಡಲಾಗಿದೆ. ಅಲ್ಲಲ್ಲಿ ಹಂಪ್​ಗಳನ್ನು ಹಾಕಲಾಗಿದೆ. ಅದಕ್ಕೆ ಸರಿಯಾಗಿ ಬಣ್ಣ ಬಳಿದು ಹಂಪ್ ಕಾಣುವಂತೆ ಮಾಡಿಲ್ಲ. ಸೂಚನಾ ಫಲಕ ಅಳವಡಿಸಿಲ್ಲ.
  • ರಸ್ತೆಯ ನಡುವೆಯೇ ನೀರು ಹರಿಯುತ್ತಿದೆ. ಹಲವೆಡೆ ನೀರು ಹಳ್ಳವಾಗಿ ನಿಲ್ಲುತ್ತಿದೆ. ಗುಡ್ಡದ ಮೇಲಿಂದ ಬಂದ ಮಣ್ಣು ಮರಳು ಹೆದ್ದಾರಿಯಲ್ಲಿ ಹರಡಿಕೊಂಡಿದೆ.
  • ಪದೇಪದೆ ರಸ್ತೆ ದಿಕ್ಕು ಬದಲಿಸುವ ಕಾರಣ ವಾಹನ ಚಾಲಕರಿಗೆ ಗೊಂದಲವಾಗುವಂತಿದೆ. ಇವು ವಾಹನಗಳ ಅಪಘಾತ ಹೆಚ್ಚಲು ಕಾರಣವಾಗಿವೆ.

Leave a Reply

Your email address will not be published. Required fields are marked *