ಗುಡಿಸಲು ನಿವಾಸಿಗಳಿಗೆ ಸಿಗದ ‘ಆಶ್ರಯ’

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ಸಂಜೆ ಮಳೆ ಸುರಿಯಲಾರಂಭಿಸಿದರೆ ರಾತ್ರಿ ಊಟ ಮಾಡಂಗಿಲ್ಲ. ಕುಡಿಯಲು ನೀರೂ ಸಿಗಂಗಿಲ್ಲ. ದೀಪ ಹತ್ತುವುದೇ ಇಲ್ಲ. ಕತ್ತಲಲ್ಲಿ ಮಕ್ಕಳನ್ನು ಹೊತ್ತುಕೊಂಡು ಬೆಳಕಿಗಾಗಿ ಬೆಳಗಿನ ಜಾವದವರೆಗೂ ಎದುರು ನೋಡಬೇಕು. ಮಳೆ ಬಂದರೆ ನಿದ್ದೆ ಮಾಯ..!

ಇದು ನಗರದ ಹೊರವಲಯದ ಅಡವಿ ಆಂಜನೇಯ ಬಡಾವಣೆಯ ಗುಡಿಸಲು ನಿವಾಸಿಗಳ ಕಣ್ಣೀರಿನ ಕಥೆ.

ಒಂದು ಹೊತ್ತಿನ ಹೊಟ್ಟೆ ತುಂಬಿಸಿಕೊಳ್ಳಲು ನಿತ್ಯವೂ ಕಿ.ಮೀ.ಗಟ್ಟಲೇ ಓಡಾಡಿ ಕೂಲಿ-ನಾಲಿ ಮಾಡಿಕೊಂಡು ಬರುವ ಗುಡಿಸಲು ನಿವಾಸಿಗಳಿಗೆ ‘ಮಳೆ’ ಬಂದರೆ ಸಾಕು ಬದುಕೇ ಬೇಡ ಎನ್ನುವಷ್ಟರ ಮಟ್ಟಿಗೆ ಬೇಸತ್ತು ಹೋಗಿದ್ದಾರೆ.

ವರುಣನ ಆರ್ಭಟಕ್ಕೆ ತತ್ತರಿಸಿದ ಬದುಕು: ಈ ಭಾಗದಲ್ಲಿ ಸುಡಗಾಡ ಸಿದ್ಧರು, ಅಲೆಮಾರಿ, ಸಿಳ್ಳೆಕ್ಯಾತರು, ಹಕ್ಕಿಪಿಕ್ಕಿ ಜನಾಂಗದವರು ಸೇರಿ 100ಕ್ಕೂ ಅಧಿಕ ಕುಟುಂಬಗಳು ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರು ನಿರ್ವಿುಸಿಕೊಂಡ ಗುಡಿಸಲುಗಳ ಮಾರ್ಗವಾಗಿಯೇ ಕಾಲುವೆ ನೀರು ಹರಿಯುತ್ತದೆ. ಮಳೆ ಬಂದಾಗ ಸಂಪೂರ್ಣ ನೀರು ಗುಡಿಸಲುಗಳಿಗೆ ನುಗ್ಗುತ್ತಿದ್ದು, ಮಾಡಿದ ಅಡುಗೆ, ಪಾತ್ರೆ, ಹಾಸಿಗೆ ಹಾಗೂ ನಿತ್ಯ ಬಳಕೆಯ ವಸ್ತುಗಳು ನೀರಿನಲ್ಲಿ ತೇಲಿ ಹೋಗುತ್ತಿವೆ. ಹೀಗಾಗಿ, ರಾತ್ರಿ ಮಳೆ ಬಂದರೆ ಗುಡಿಸಲು ನಿವಾಸಿಗಳಿಗೆ ಊಟ, ನಿದ್ದೆ ಇಲ್ಲ. ಮಕ್ಕಳು ಹಾಗೂ ಮನೆಯಲ್ಲಿನ ವಸ್ತುಗಳನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗುತ್ತಿದೆ. ಮರುದಿನ ಬಿದ್ದು ಹೋದ ಗುಡಿಸಲನ್ನು ಮತ್ತೆ ಕಟ್ಟಿಕೊಳ್ಳಬೇಕು. ನೆಲಹಾಸನ್ನು ಸ್ವಚ್ಛಗೊಳಿಸಿ, ಅದು ಒಣಗುವವರೆಗೂ ಬೀದಿಯಲ್ಲಿಯೇ ಜೀವನ ಕಳೆಯುವ ದುಸ್ಥಿತಿ ಇವರದ್ದು.

ಕಣ್ತೆರೆದು ನೋಡದ ಅಧಿಕಾರಿ, ಜನಪ್ರತಿನಿಧಿಗಳು: ಬಡಾವಣೆಯಲ್ಲಿ ನಗರಸಭೆಯಿಂದ ನಿರ್ವಿುಸಿದ 350 ಆಶ್ರಯ ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಆದರೆ, ಉಳ್ಳವರ ಪಾಲಾಗಿರುವ 50ಕ್ಕೂ ಅಧಿಕ ಮನೆಗಳು ಖಾಲಿ ಬಿದ್ದಿವೆ. ಇಲ್ಲಿ ಆಶ್ರಯ ಮನೆ ಪಡೆದ ಕೆಲವರು ಅವುಗಳನ್ನು ಖಾಲಿ ಬಿಟ್ಟು ನಗರದಲ್ಲಿ ಬಂದುಳಿದಿದ್ದಾರೆ. ಆಗಸ್ಟ್ ತಿಂಗಳಲ್ಲಿ ನೆರೆ ಹಾವಳಿ ಎದುರಾದಾಗ ಗುಡಿಸಲು ನಿವಾಸಿಗಳಿಗೆ ಸಂಕಷ್ಟ ಆಲಿಸಿ, ಆಶ್ರಯ ಮನೆ ಕೊಡಿಸುವ ಭರವಸೆ ನೀಡಿ ಹೋದ ಸ್ಥಳೀಯ ಮಾಜಿ ಶಾಸಕರು, ನಗರಸಭೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಈವರೆಗೂ ಇತ್ತ ಕಣ್ಣು ಹಾಯಿಸಿಲ್ಲ. ಇದು ಗುಡಿಸಲು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆಶ್ರಯ ಮನೆಗಳನ್ನು ನೀಡುವಂತೆ 106 ಕುಟುಂಬದವರು 2011ರಲ್ಲಿಯೇ ನಗರಸಭೆಗೆ 30 ಸಾವಿರ ರೂ. ತುಂಬಿದ್ದೇವೆ. ಆದರೆ, ನಾನಾ ಕುಂಟು ನೆಪ ಹೇಳುವ ಅಧಿಕಾರಿಗಳು ಈವರೆಗೂ ಮನೆ ಮಂಜೂರು ಮಾಡಿಲ್ಲ. ಇದೀಗ ಮಳೆ ಬೀಳುತ್ತಿರುವ ಕಾರಣ ಖಾಲಿ ಬಿದ್ದಿರುವ ಆಶ್ರಯ ಮನೆಗಳನ್ನು ನೀಡುವಂತೆ ಕೇಳಿಕೊಂಡರೂ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಆಗಸ್ಟ್ ತಿಂಗಳ ಮಳೆಯಲ್ಲಿ ಕೊಚ್ಚಿ ಹೋಗಿದ್ದ ಗುಡಿಸಲು ನಿರ್ವಿುಸಿಕೊಳ್ಳುವಷ್ಟರಲ್ಲಿಯೇ ಮತ್ತೀಗ ಮಳೆ ಬರುತ್ತಿದೆ. ಊಟ, ನಿದ್ದೆ ಇಲ್ಲದೇ ಜೀವನವೇ ಬೇಡ ಎನ್ನುವ ಹಂತಕ್ಕೆ ಬಂದಿದ್ದೇವೆ. ಆಶ್ರಯ ಮನೆ ಕೊಡುವ ಭರವಸೆ ನೀಡಿದ ಅಧಿಕಾರಿ, ಜನಪ್ರತಿನಿಧಿಗಳು ಪತ್ತೆಯಿಲ್ಲ. | ಸಾಯಪ್ಪ ಪಾಸ್ತಮದ್ದೂರ, ಗುಡಿಸಲು ನಿವಾಸಿ

ಆಂಜನೇಯ ಬಡಾವಣೆಯಲ್ಲಿ ಒಟ್ಟು 850 ಆಶ್ರಯ ಮನೆ ನಿರ್ವಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ 350 ನಿರ್ವಿುಸಿ ಫಲಾನುಭವಿಗಳಿಗೆ ನೀಡಲಾಗಿದೆ. ಉಳಿದ 500 ಮನೆ ನಿರ್ವಣಕ್ಕೆ ಅನುದಾನ ಬಂದಿಲ್ಲ. ಈ ಕುರಿತು ಮತ್ತೊಂದು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಖಾಲಿಯಿರುವ ನಿವೇಶನಗಳ ಬಗ್ಗೆ ಕ್ರಮ ಕೈಗೊಂಡು ಅರ್ಹ ಫಲಾನುಭವಿಗೆ ನೀಡಲಾಗುವುದು. ಮಳೆಯಿಂದ ಗುಡಿಸಲು ನಿವಾಸಿಗಳಿಗೆ ಆಗಿರುವ ಹಾನಿ ಕುರಿತು ಪರಿಶೀಲಿಸಿದ್ದೇವೆ. ತಾತ್ಕಾಲಿಕವಾಗಿ ಅವರಿಗೆ ಸರ್ಕಾರಿ ಶಾಲೆಯಲ್ಲಿ ಉಳಿದುಕೊಳ್ಳಲು ತಿಳಿಸಿದ್ದೇವೆ. | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

Leave a Reply

Your email address will not be published. Required fields are marked *