ಗುಂಪು ಮನೆ ಅನರ್ಹರ ಪಾಲು?

ಗದಗ: ಮನೆ ಇಲ್ಲದವರಿಗೆ ಸೂರು ನೀಡುವ ಉದ್ದೇಶದಿಂದ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ನಗರದ ಗಂಗಿಮಡಿ ಪ್ರದೇಶದ ಬಳಿ ನಿರ್ವಿುಸುತ್ತಿರುವ ಗುಂಪು ಮನೆಗಳು ಅನರ್ಹರ ಪಾಲಾಗಿವೆ ಎಂಬ ಆರೋಪ ಕೇಳಿಬಂದಿದೆ.

ಗಂಗಿಮಡಿ ಬಳಿ 3630 ಗುಂಪು ಮನೆಗಳನ್ನು ನಿರ್ವಿುಸಲಾಗುತ್ತಿದ್ದು, ಬಡವರಿಗೆ ಮನೆ ನೀಡಬೇಕು ಎನ್ನುವುದು ಯೋಜನೆಯ ಉದ್ದೇಶವಾಗಿದೆ. ಆದರೆ, ಆರ್ಥಿಕವಾಗಿ ಬಲಾಢ್ಯರು ಹಾಗೂ ಈಗಾಗಲೇ ಸ್ವಂತ ಮನೆ ಹೊಂದಿರುವವರು ನಕಲಿ ದಾಖಲೆ ಸೃಷ್ಟಿಸಿ ಮನೆಗಳ ಹಕ್ಕುಪತ್ರ ಪಡೆಯಲು ಮುಂದಾಗಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯೆ ಖಮರ್ ಸುಲ್ತಾನ್ ನಮಾಜಿ ಆರೋಪಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ನಕಲಿ ದಾಖಲೆ ಸೃಷ್ಟಿಸಿ ಮನೆಗಳನ್ನು ಪಡೆಯಲು ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದೂರಿನಲ್ಲೇನಿದೆ…
ಹೌಸಿಂಗ್ ಫಾರ್ ಆಲ್ ಯೋಜನೆ ಮನೆ ಇಲ್ಲದವರಿಗೆ ಸೂರು ಕಲ್ಪಿಸುವ ಮಹತ್ವದ ಯೋಜನೆಯಾಗಿದ್ದು, ಆದರೆ, ಜವುಳಗಲ್ಲಿ ನಿವಾಸಿ ಯುಸೂಫ್ ಗಫಾರಸಾಬ್ ನಮಾಜಿ ರೆಹಮತ್​ನಗರದ ನಿವಾಸಿ ಎಂದು ಸುಳ್ಳು ಹೇಳಿದ್ದಾರೆ. ಅಲ್ಲದೆ, ಅವರು ತಮ್ಮ ಕುಟುಂಬದ ಸದಸ್ಯರಾದ ಅಕ್ಕ, ತಮ್ಮ, ಅತ್ತೆ, ಅಳಿಯ, ಸೊಸೆ, ಹೆಂಡತಿ, ಅಣ್ಣ, ತಮ್ಮಂದಿರ ಹೆಸರಿನಲ್ಲಿ ಎಲ್ಲರಿಗೂ ಮನೆ ಇದ್ದರೂ ನಕಲಿ ದಾಖಲೆ ಸೃಷ್ಟಿಸಿ ಗಂಗಿಮಡಿಯಲ್ಲಿ ನಿರ್ವಣಗೊಳ್ಳುತ್ತಿರುವ 23 ಮನೆಗಳಿಗೆ ಹಕ್ಕು ಪತ್ರ ಪಡೆದಿರುವುದು ಬೆಳಕಿಗೆ ಬಂದಿದೆ.

ಇದಲ್ಲದೆ, ಅನೇಕರಿಗೆ ಗುಂಪು ಮನೆ ಯೋಜನೆಯಲ್ಲಿ ಮನೆ ಕೊಡಿಸಿ ಪ್ರತಿಯೊಬ್ಬರಿಂದ 15,000 ರೂಪಾಯಿ ಪಡೆದಿರುತ್ತಾನೆ. ಯುಸುಫ್ ಗಫಾರಸಾಬ್ ನಮಾಜಿ ಅವರಿಗೆ ಗಂಗಿಮಡಿ ಮತ್ತು ಜವುಳಗಲ್ಲಿಯಲ್ಲಿ ಸ್ವಂತ ಮನೆ ಇದೆ. ಈ ವಿಷಯ ತಿಳಿದ ಮೇಲೆ ನಗರಸಭೆ ಪೌರಾಯುಕ್ತರಿಗೆ ದೂರು ಸಲ್ಲಿಸಲಾಗಿದ್ದು, ಪರಿಶೀಲಿಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಗಿತ್ತು. ಆದರೆ, ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ನಕಲಿ ದಾಖಲೆ ಸೃಷ್ಟಿಸಿದ ಯುಸೂಫ್ ಗಫಾರಸಾಬ್ ನಮಾಜಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದುಹಾಕಿ ಅರ್ಹ ಬಡ ಫಲಾನುಭವಿಗಳಿಗೆ ಮನೆ ನೀಡಬೇಕು ಎಂದು ಖಮರ್ ಸುಲ್ತಾನ್ ನಮಾಜಿ ಅವರು ಜಿಲ್ಲಾಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಗಂಗಿಮಡಿ ಪ್ರದೇಶದ ಬಳಿ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಗುಂಪು ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಫಲಾನುಭವಿಗಳಿಗೆ ಹಂಚಿಕೆ ಆಗಿಲ್ಲ. ಈ ಕುರಿತು ತಮಗೆ ಯಾವುದೇ ದೂರು ಸಲ್ಲಿಕೆಯಾಗಿಲ್ಲ. ದೂರು ನೀಡಿದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
ದೀಪಕ್ ಹರದಿ, ಪೌರಾಯುಕ್ತ, ಗದಗ ಬೆಟಗೇರಿ ನಗರಸಭೆ

Leave a Reply

Your email address will not be published. Required fields are marked *