ಗುಂಪುಗಾರಿಕೆಯಿಂದ ಹಸ್ತವ್ಯಸ್ತ!

ಹುಬ್ಬಳ್ಳಿ:ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಸೋಲಿನ ಬಳಿಕ ಪಕ್ಷದಲ್ಲಿನ ಒಡಕು, ಕಚ್ಚಾಟ ಬಹಿರಂಗಗೊಂಡಿದೆ. ಕೈ ಪಾಳೆಯದಲ್ಲಿ ಗುಂಪುಗಾರಿಕೆ ಹೊಸತೇನಲ್ಲ. ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುವುದು ಇಲ್ಲಿ ಸಾಮಾನ್ಯ. ಇಂಥ ದುರ್ಗಣದಿಂದ ಸತತ 7ನೇ ಬಾರಿ ಧಾರವಾಡ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿದೆ.

ವಿನಯ ಕುಲಕರ್ಣಿ ಆಗಾಗ ಹೇಳುತ್ತಿರುತ್ತಾರೆ, ನಮ್ಮವರೇ ಬೆನ್ನಿಗೆ ಚೂರಿ ಹಾಕಿದರು ಎಂದು. ಈ ಬಾರಿ ಸೋಲಿನ ಬಳಿಕ ಅವರು ಅಂಥ ಹೇಳಿಕೆ ನೀಡುವ ಮೊದಲೇ ಪಕ್ಷದ ಕೆಲ ಮುಖಂಡರು ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿ, ಲಿಂಗಾಯತ ಮುಖಂಡ ರಾಜಶೇಖರ ಮೆಣಸಿನಕಾಯಿ ಹಾಗೂ ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ ಹೇಳಿಕೆಯನ್ನು ಅಲ್ಲಗಳೆಯುವಂತಿಲ್ಲ. ವಿನಯ ಕುಲಕರ್ಣಿ ತಮ್ಮ ಆಪ್ತರನ್ನಷ್ಟೇ ನಂಬಿಕೊಂಡಿದ್ದು ಹಾಗೂ ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದು ಸುಳ್ಳಲ್ಲ.

ಸ್ಥಳೀಯ ಕಾಂಗ್ರೆಸ್ಸಿನಲ್ಲಿ ಲೆಕ್ಕವಿಲ್ಲದಷ್ಟು ಗುಂಪುಗಳಿವೆ. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಜಿಲ್ಲೆಗೆ ಬಂದಾಗಲಷ್ಟೇ ಸದಾನಂದ ಡಂಗನವರ ಕಾಣಿಸಿಕೊಳ್ಳುತ್ತಾರೆ. ಗೃಹ ಸಚಿವ ಎಂ.ಬಿ. ಪಾಟೀಲ ಬಂದಾಗ ರಾಜಶೇಖರ ಮೆಣಸಿನಕಾಯಿ, ಮಾಜಿ ಸಚಿವ ಎಚ್.ಕೆ. ಪಾಟೀಲ ಬಂದಾಗ ಕೆಪಿಸಿಸಿ ಉಪಾಧ್ಯಕ್ಷ ಎ.ಎಂ. ಹಿಂಡಸಗೇರಿ, ಎಫ್.ಎಚ್. ಜಕ್ಕಪ್ಪನವರ, ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ ನೀಡಿದಾಗ ಮೋಹನ ಹಿರೇಮನಿ ಕಾಣಿಸಿಕೊಳ್ಳುತ್ತಾರೆ. ಹೀಗೆ ಹಲವು ಗುಂಪುಗಳಿವೆ. ಸಿದ್ದರಾಮಯ್ಯ, ಖರ್ಗೆ, ಡಾ. ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ, ಆರ್.ವಿ. ದೇಶಪಾಂಡೆ ಹೀಗೆ ಒಬ್ಬೊಬ್ಬ ನಾಯಕರು ತಮ್ಮದೇ ಆದ ಆಪ್ತ ವಲಯವನ್ನು ಸೃಷ್ಟಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಒಗ್ಗಟ್ಟಾಗಿ ಚುನಾವಣೆ ಎದುರಿಸಿದ್ದು ವಿರಳ.

ದಿನೇಶ ಗುಂಡೂರಾವ್ ಅಥವಾ ಕೆ.ಎಚ್. ಮುನಿಯಪ್ಪ ಬೆಂಬಲಿಗರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದಾರೆಂದು ನಂಬುವುದು ಕಷ್ಟ. ಮುಂದುವರಿದು ಹೇಳುವುದಾದರೆ, ಕಾಂಗ್ರೆಸ್ ಪದಾಧಿಕಾರಿಗಳೆಲ್ಲರೂ ತಮ್ಮ ಮತವನ್ನೇ ವಿನಯ ಕುಲಕರ್ಣಿಗೆ ಚಲಾಯಿಸಿದ್ದಾರೆಂದು ನಂಬಲಾಗದ ಸ್ಥಿತಿಗೆ ಕಾಂಗ್ರೆಸ್ ಬಂದು ನಿಂತಿದೆ.

ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಕಾಂಗ್ರೆಸ್​ಗೆ ಕಾರ್ಯಕರ್ತರು ಇಲ್ಲದಂತಾಗುವ ಸ್ಥಿತಿ ನಿರ್ವಣವಾಗಲಿದೆ. ಇದ್ದವರಲ್ಲಿಯೇ ಯಾರಾದರೂ ಪಕ್ಷದಲ್ಲಿ ಒಗ್ಗಟ್ಟು ಮೂಡಿಸಬೇಕು. ಎಲ್ಲರೂ ಎಲ್ಲರನ್ನು ನಂಬುವ ಸ್ಥಿತಿ ನಿರ್ವಣವಾಗಬೇಕು. ನಾಯಕರು ಅಹಂ, ಸರ್ವಾಧಿಕಾರ ಧೋರಣೆ ಬಿಟ್ಟು ಕೆಲಸ ಮಾಡಬೇಕಿದೆ.

ವಿಚಿತ್ರ ನೋಡಿ, ಚುನಾವಣೆ ಸಂದರ್ಭದಲ್ಲಿ ಮೋದಿ ಅಲೆ ಇಲ್ಲ ಎಂದು ಹೇಳುತ್ತಿದ್ದ ನಾಯಕರು ಇದೀಗ ಫಲಿತಾಂಶದ ಬಳಿಕ ಮೋದಿ ಅಲೆಯಿಂದ ಸೋಲು ಕಾಣಬೇಕಾಯಿತು ಎಂದು ತಮ್ಮ ತಪ್ಪನ್ನು ಮುಚ್ಚಿಕೊಳ್ಳುತ್ತಿದ್ದಾರೆ. ಪಕ್ಷದ ಹಿರಿಯರು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಗೋಜಿಗೆ ಹೋಗುವುದಿಲ್ಲ. ಯುವಕರು ಹೆಜ್ಜೆ ಮುಂದಿಟ್ಟರೆ ಅಡ್ಡಿ ಬರುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಸೋಲಿಗೆ ಕಾರಣವಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಲೋಕಸಭೆ ಚುನಾವಣೆಯಲ್ಲೂ ಮುಳುವಾಯಿತು.

2013ರಲ್ಲಿ ಧಾರವಾಡ ಜಿಲ್ಲೆಯಲ್ಲಿ ನಾಲ್ವರು ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ 2018ಕ್ಕೆ 2ಕ್ಕೆ ಕುಸಿದಿತ್ತು. ಐವರು ಬಿಜೆಪಿ ಶಾಸಕರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಹೊರಗಿನವರ ಕೈಯಲ್ಲಿದೆ. ರಾಜ್ಯ ಸರ್ಕಾರದ ಭವಿಷ್ಯವೇ ತೂಗುಯ್ಯಾಲೆಯಲ್ಲಿ ಇರುವಾಗ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ ಚೇತರಿಕೆಯ ಲಕ್ಷಣಗಳು ಸದ್ಯದ ಮಟ್ಟಿಗೆ ಕಾಣಿಸುತ್ತಿಲ್ಲ. ಗುಂಪುಗಾರಿಕೆ ತ್ಯಜಿಸದ ಹೊರತು ಕಾಂಗ್ರೆಸ್ಸಿಗೆ ಉಳಿಗಾಲವಿಲ್ಲ.

ಇದು ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳುವ ಕಾಲ. ಬದಲಾವಣೆ ಅಗತ್ಯವಿದೆ. ಹೊಸ ರಾಜಕೀಯ ಸಂಸ್ಕೃತಿಯನ್ನು ನಾವು ಅಳವಡಿಸಿಕೊಳ್ಳಬೇಕಿದೆ.

ಎಚ್.ಕೆ. ಪಾಟೀಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

Leave a Reply

Your email address will not be published. Required fields are marked *