ಗುಂಡು ಹೊಡೆದುಕೊಂಡು ಸಾವು

ಹಳಿಯಾಳ: ತಾಲೂಕಿನ ಖಾನಾಪುರ-ತಾಳಗುಪ್ಪ ರಾಷ್ಟ್ರೀಯ ಹೆದ್ದಾರಿಯ ಕುಂಬಾರಕೊಪ್ಪ ಗ್ರಾಮದ ಕ್ರಾಸ್ ಬಳಿ ವ್ಯಕ್ತಿಯೊಬ್ಬರು ಪಿಸ್ತೂಲಿನಿಂದ ಗುಂಡು ಹೊಡೆದುಕೊಂಡು ಶನಿವಾರ ರಾತ್ರಿ ಸಾವನಪ್ಪಿದ್ದಾರೆ.

ಮೈಸೂರಿನ ಟಿ. ನರಸೀಪುರ ತಾಲೂಕಿನ ಕಾರಗಳ್ಳಿಯ ನಿವಾಸಿ ಮಂಜುನಾಥ ವಾಸು(40) ಮೃತರು.

ಕಾರಿನಲ್ಲಿ ನಾಡ ಪಿಸ್ತೂಲ್ ಬಳಸಿ ಹಣೆಗೆ ಶೂಟ್ ಮಾಡಿಕೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬಿಟ್ಟು ಚರಂಡಿ ದಾಟಿ ಕಾರ್ ನಿಂತಿತ್ತು. ಇದನ್ನು ಗಮನಿಸಿದ ಸಮೀಪದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಹಳಿಯಾಳ ಪಿಎಸ್​ಐ ಆನಂದಮೂರ್ತಿ ನೇತೃತ್ವದ ತಂಡ ಹಾಗೂ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಬ್ಯಾಕೋಡ್, ದಾಂಡೇಲಿ ಡಿವೈಎಸ್ಪಿ ಮೋಹನ ಪ್ರಸಾದ ಪರಿಶೀಲನೆ ನಡೆಸಿದರು.

ಮೃತದ ದೇಹವನ್ನು ಪರೀಕ್ಷೆಗಾಗಿ ಕಾರವಾರ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಕಾರವಾರದಿಂದ ಬೆರಳಚ್ಚು ತಂತ್ರಜ್ಞರ ತಂಡ ಹಾಗೂ ಬೆಂಗಳೂರಿನಿಂದ ಗನ್ ತಜ್ಞರ ತಂಡ ಆಗಮಿಸಿ ತನಿಖೆಯನ್ನು ನಡೆಸಿದೆ. ಮಂಜುನಾಥ ಅವರು ತಮ್ಮ ಸ್ನೇಹಿತನ ಕಾರು ತಂದಿದ್ದರು ಎನ್ನಲಾಗುತ್ತಿದೆ. ಅಲ್ಲದೆ, ಇದು ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವ್ಯಕ್ತವಾಗಿದೆ. ಬೆಳಗಾವಿಯಲ್ಲಿರುವ ಮಂಜುನಾಥ ಅವರ ಪತ್ನಿಯನ್ನು ಹಳಿಯಾಳಕ್ಕೆ ಕರೆಸಲಾಗಿದ್ದು ಈ ಸಾವಿನ ನಿಗೂಢತೆಯನ್ನು ಬಿಡಿಸಲು ಹಳಿಯಾಳ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.