ಗುಂಡು ಹಾರಿಸಿ ದರೋಡೆಕೋರನ ಸೆರೆ

ನೆಲಮಂಗಲ: ಹೆದ್ದಾರಿಗಳಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ಶುಕ್ರವಾರ ಗುಂಡು ಹಾರಿಸಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಮಾಗಡಿ ತಾಲೂಕಿನ ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ (22) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮತ್ತೊಬ್ಬ ಆರೋಪಿ ತ್ಯಾಮಗೊಂಡ್ಲು ನಿವಾಸಿ ಶ್ರೀನಿವಾಸ್ ಅಲಿಯಾಸ್ ಸೀನ (24) ಎಂಬುವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಸ್​ಐ ಕುಮಾರಸ್ವಾಮಿ ಕಾರ್ಯಾಚರಣೆ ವೇಳೆ ಹಲ್ಲೆಗೊಳಗಾಗಿದ್ದು, ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತ್ಯೇಕ ಪ್ರಕರಣ ದಾಖಲು:ಮಾ.20ರ ರಾತ್ರಿ ಬೂದಿಹಾಳ್ ಬಳಿ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ಜಾರ್ಖಾಂಡ್ ಮೂಲದ ಲಾರಿ ಚಾಲಕ ಮೊಹಮ್ಮದ್ ವಾರೀಸ್ ಮತ್ತವನ ಸ್ನೇಹಿತನನ್ನು ಅಡ್ಡಗಟ್ಟಿದ ಆರೋಪಿಗಳು ಡ್ರಾಗರ್​ನಿಂದ ಇರಿದು ಹಣ ಕಸಿದು ಪರಾರಿಯಾಗಿದ್ದರು. ಅದೇ ದಿನ ರಾತ್ರಿ 10 ಗಂಟೆ ಸುಮಾರಿಗೆ ದಾಬಸ್​ಪೇಟೆಯ ಬಿಲ್ಲಿನಕೋಟೆ ಹೆದ್ದಾರಿಯಲ್ಲಿ ಆಟೋ ಚಾಲಕನನ್ನು ಅಡ್ಡಗಟ್ಟಿ ಎದೆಗೆ ಇರಿದು ಹಣ ದೋಚಿದ್ದರು. ಈ ಪ್ರಕರಣಗಳ ಬೆನ್ನುಬಿದ್ದ ಪೊಲೀಸರು ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ.

ದಾಬಸ್​ಪೇಟೆಯಿಂದ ನೆಲಮಂಗಲದ ಕಡೆಗೆ ಆರೋಪಿ ಜಯಂತ್ ಹಾಗೂ ಶ್ರೀನಿವಾಸ್ ಬರುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ವೃತ್ತನಿರೀಕ್ಷಕ ಅನಿಲ್​ಕುಮಾರ್, ಎಸ್​ಐ ಶಂಕರ್​ನಾಯಕ್, ಕುಮಾರಸ್ವಾಮಿ ನೇತೃತ್ವದ ತಂಡ ಬೂದಿಹಾಳ್ ಬಳಿ ಬಂಧಿಸಲು ಮುಂದಾಗಿದೆ. ಈ ವೇಳೆ ಆರೋಪಿ ಜಯಂತ್ ಹಿಡಿಯಲು ಬಂದ ಎಸ್​ಐ ಕುಮಾರಸ್ವಾಮಿ ಅವರಿಗೆ ಡ್ರಾಗರ್​ನಿಂದ ಇರಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ವೃತ್ತ ನಿರೀಕ್ಷಕ ಅನಿಲ್​ಕುಮಾರ್ ಹಾಗೂ ದಾಬಸ್​ಪೇಟೆ ಎಸ್​ಐ ಶಂಕರ್​ನಾಯಕ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆೆ. ಆದರೂ ಮತ್ತೊಮ್ಮೆ ಡ್ರಾಗರ್​ನಿಂದ ಹಲ್ಲೆಗೆ ಮುಂದಾದ ಆರೋಪಿ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಸಹಚರ ಶ್ರೀನಿವಾಸನನ್ನು ಬೆನ್ನಟ್ಟಿ ಹಿಡಿದ್ದಾರೆ.

25ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿ: ಆರೋಪಿ ಜಯಂತ್ ದಾಬಸ್​ಪೇಟೆ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, ನೆಲಮಂಗಲ ಟೌನ್ ಠಾಣೆ, ಗ್ರಾಮಾಂತರ, ಮಾದನಾಯಕನಹಳ್ಳಿ, ತ್ಯಾಮಗೊಂಡ್ಲು, ಸೇರಿ ಬೆಂಗಳೂರಿನ ರಾಜಗೋಪಾಲನಗರ, ಕೆಂಗೇರಿ, ಎಚ್.ಎಸ್.ಆರ್.ಲೇಔಟ್, ಹೆಣ್ಣೂರು, ತುಮಕೂರು ಜಿಲ್ಲೆ ಕ್ಯಾತ್ಸಂದ್ರ, ಕೋರಾ ಠಾಣೆಗಳಲ್ಲಿ 25 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.