ಗುಂಡಿಮಯ ರಸ್ತೆಯಲ್ಲೇ ಸವಾರಿ 

ಧಾರವಾಡ: ನಗರದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಹಳೆಯ ಡಿಎಸ್​ಪಿ ವೃತ್ತದಿಂದ ಮುರುಘಾ ಮಠದವರೆಗೆ ಸಂಪೂರ್ಣ ಹದಗೆಟ್ಟು ಹೋಗಿದೆ. ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಗುಂಡಿಮಯವಾಗಿದ್ದು, ವಾಹನ ಸಂಚಾರ ಅಸಹನೀಯವಾಗಿದೆ.

ಧಾರ್ವಿುಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಹೆರಿಟೇಜ್ ಕಾರಿಡಾರ್​ಗಳಾದ ಧಾರವಾಡ- ಸವದತ್ತಿ, ರಾಮದುರ್ಗ, ಬಾದಾಮಿ, ಪಟ್ಟದಕಲ್ಲು ಮತ್ತು ಕಮತಗಿವರೆಗಿನ ಹೆದ್ದಾರಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ಧಾರವಾಡ- ಸವದತ್ತಿ ರಾಜ್ಯ ಹೆದ್ದಾರಿ ಕಾಮಗಾರಿ ಈಗಾಗಲೇ ಮುಕ್ತಾಯಗೊಂಡಿದೆ. ನಗರದ ಡಿಎಸ್​ಪಿ ವೃತ್ತದಿಂದ ಮುರುಘಾ ಮಠದವರೆಗಿನ 2.5 ಕಿ.ಮೀ. ಉದ್ದದ ರಸ್ತೆಯ ಉನ್ನತೀಕರಣ (ಡಬ್ಲುಇಪಿ-3ಎ ಪ್ಯಾಕೇಜ್) ಕಾಮಗಾರಿಗೆ ಕಳೆದ ವರ್ಷ ಚಾಲನೆ ನೀಡಲಾಗಿದೆ. ಹೀಗಾಗಿ ಗುಂಡಿ ಬಿದ್ದರೂ ತಾತ್ಕಾಲಿಕವಾಗಿ ಮುಚ್ಚುವ ಕೆಲಸವೂ ನಡೆಯುತ್ತಿಲ್ಲ.

18.40 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಶ್ಯೂರ್ ರಸ್ತೆ ಕಾಮಗಾರಿ ನಡೆಯುತ್ತಿದೆ. 2017ರ ಡಿ. 1ರಂದು ಕಾಮಗಾರಿ ಆರಂಭಗೊಂಡಿದ್ದು, 2019ರ ಮಾ. 31ಕ್ಕೆ ಮುಕ್ತಾಯವಾಗಬೇಕು. ಹುಬ್ಬಳ್ಳಿಯ ಟ್ರಿನಿಟಿ ಗ್ರುಪ್ ಗುತ್ತಿಗೆ ಪಡೆದಿದ್ದು, ಕಾಮಗಾರಿ ಮುಕ್ತಾಯಕ್ಕೆ 15 ತಿಂಗಳ ಗಡುವು ನೀಡಲಾಗಿದೆ. ಈಗಾಗಲೇ 8 ತಿಂಗಳು ಕಳೆದಿದ್ದರೂ ಕಾಮಗಾರಿ ಮಾತ್ರ ವೇಗ ಪಡೆದಿಲ್ಲ.

ವಿಶ್ವ ಬ್ಯಾಂಕ್ ನೆರವಿನಡಿ ಕಾಮಗಾರಿ ಕೈಗೊಳ್ಳಲಾಗಿದ್ದು, ರಸ್ತೆಯ ಉನ್ನತೀಕರಣ, ಎರಡೂ ಬದಿ ಹೊದಿಕೆ ಸಹಿತ ಚರಂಡಿ, ಎರಡೂ ಬದಿ 1.15 ಕಿ.ಮೀ. ಹೊದಿಕೆ ಸಹಿತ ಯುಟಿಲಿಟಿ ಡಕ್ಟ್, ಪಾದಚಾರಿ ಮಾರ್ಗ, 1 ಸಣ್ಣ ಹಾಗೂ 4 ಬೃಹತ್ ಜಂಕ್ಷನ್, 3 ಬಸ್ ಪ್ರಯಾಣಿಕರ ತಂಗುದಾಣ, 6 ಪಾದಚಾರಿ ಕ್ರಾಸಿಂಗ್​ಗಳು, ಆಟೋ ಬೇ, ವಾಹನ ರ್ಪಾಂಗ್ ವ್ಯವಸ್ಥೆ ಕಲ್ಪಿಸಬೇಕಿದೆ.

ಸದ್ಯ ಮುರುಘಾ ಮಠ ಕಡೆಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಚರಂಡಿ ನಿರ್ವಣ, ಪೈಪ್​ಲೈನ್, ವಿವಿಧ ಕೇಬಲ್​ಗಳ ಅಳವಡಿಕೆ ಮಾಡಲಾಗುತ್ತಿದೆ. ಬೆಂಗಳೂರಿನ ಕೆಲವೆಡೆ ಇರುವಂಥ ಟೆಂಡರ್ ಶ್ಯೂರ್ ಮಾದರಿ ರಸ್ತೆ ಇದಾಗಲಿದ್ದು, ಅಲ್ಲಿಯವರೆಗೆ ವಾಹನ ಸವಾರರು, ಪಾದಚಾರಿಗಳಿಗೆ ಕಿರಿಕಿರಿ ತಪ್ಪಿದ್ದಲ್ಲ ಎನ್ನುವಂತಾಗಿದೆ.

ಹುಬ್ಬಳ್ಳಿಯಲ್ಲೂ ರಸ್ತೆ ದುಃಸ್ಥಿತಿ: ಹುಬ್ಬಳ್ಳಿಯಲ್ಲಿ ಸಹ ಶಿರೂರ ಪಾರ್ಕ್ ರಸ್ತೆ ಟೆಂಡರ್ ಶ್ಯೂರ್ ಮಾರ್ಗವಾಗುತ್ತಿದೆ. ಆರ್ಟ್ಸ್ ಕಾಲೇಜ್ ಎದುರಿನಿಂದ ತೋಳನಕೆರೆಯವರೆಗೆ ಒಂದು ಕಡೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇನ್ನೊಂದೆಡೆ ಮಾರ್ಗ ಪೂರ್ಣ ಹಾಳಾಗಿದೆ. ನಿತ್ಯ ಸಹಸ್ರಾರು ವಾಹನ, ಪಾದಚಾರಿಗಳು ಸಂಚರಿಸುವ ಈ ರಸ್ತೆ ಹೊಂಡ-ತಗ್ಗು ಬಿದ್ದಿದ್ದು, ಸರ್ಕಸ್ ಮಾಡುತ್ತ ಓಡಾಡುವಂತಾಗಿದೆ. ಕಾಮಗಾರಿ ಮುಗಿಯಲು ಇನ್ನೂ ಆರೆಂಟು ತಿಂಗಳು ಬೇಕಾಗಿದ್ದು, ಇನ್ನೊಂದು ಕಡೆಯ ರಸ್ತೆಯನ್ನು ತಾತ್ಕಾಲಿಕವಾದರೂ ದುರಸ್ತಿ ಮಾಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.